ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ– ರಮೇಶ್ ಮೂಲ್ಯ ದಂಪತಿ ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಶಿಶು ದಂಪತಿಯದ್ದಲ್ಲ ಎಂಬ ಶಂಕೆ ಅಂಗನವಾಡಿ ಕಾರ್ಯಕರ್ತೆಗೆ ಬಂದಿದೆ. ವಿಚಾರಿಸಿದಾಗ, ಮಂಗಳೂರಿನಲ್ಲಿ ಶಿಶು ಖರೀದಿಸಿದ್ದಾಗಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ (ಸಿಡಿಪಿಒ) ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಆಗಸ್ಟ್ 21 ರಂದು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳಾಗದ ಪ್ರಭಾವತಿ ಮತ್ತು ಅವರ ಪತಿ ರಮೇಶ್ ಮೂಲ್ಯ ಅವರು ಆಗಸ್ಟ್ 3 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವನ್ನು ತಮ್ಮದು ಎಂದು ಸುಳ್ಳು ಹೇಳಿಕೊಂಡು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಬಳಿಕ ಮಧ್ಯವರ್ತಿ ಮಹಿಳೆಯ ಮೂಲಕ 4 ಲಕ್ಷ ರೂ. ಗೆ ಪಾವತಿಸಿದ್ದಾರೆ ಎನ್ನಲಾಗಿದೆ.