Saturday, August 30, 2025

ಉತ್ತರ ಪ್ರದೇಶದಲ್ಲಿ “ನೋ ಹೆಲ್ಮೆಟ್, ನೋ ಪೆಟ್ರೋಲ್” : ಸೆಪ್ಟೆಂಬರ್ 1 ರಿಂದ ಹೊಸ ನಿಯಮ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಪ್ರತಿವರ್ಷ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರರು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ದುರಂತವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್ 1, 2025 ರಿಂದ “ನೋ ಹೆಲ್ಮೆಟ್, ನೋ ಇಂಧನ” ಅಭಿಯಾನ ಆರಂಭವಾಗಲಿದ್ದು, ಹೆಲ್ಮೆಟ್ ಧರಿಸದ ಸವಾರರಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಸಿಗುವುದಿಲ್ಲ.

ಈ ಕ್ರಮವನ್ನು ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘ ಸ್ವಾಗತಿಸಿದ್ದು, ಅದೇ ವೇಳೆ ಮಾರುಕಟ್ಟೆಯಲ್ಲಿ ನಕಲಿ ಹೆಲ್ಮೆಟ್‌ಗಳ ಹೆಚ್ಚುತ್ತಿರುವ ಹರಡುವಿಕೆಯಿಂದ ಆತಂಕ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ರಾಜೀವ್ ಕಪೂರ್ ಅವರ ಪ್ರಕಾರ, ಕೇವಲ 110 ಬೆಲೆಯಲ್ಲೇ ದೊರೆಯುವ ಶೇ.95 ರಷ್ಟು ಹೆಲ್ಮೆಟ್‌ಗಳು ನಕಲಿ ಆಗಿದ್ದು, ಅವು ಸವಾರರ ಜೀವ ಉಳಿಸುವ ಬದಲು ಪ್ರಾಣಾಪಾಯಕ್ಕೆ ಕಾರಣವಾಗುತ್ತಿವೆ.

ದೆಹಲಿ-ಎನ್‌ಸಿಆರ್, ಘಾಜಿಯಾಬಾದ್, ಲೋನಿ ಮತ್ತು ಕರಾರಿ ಪ್ರದೇಶಗಳಲ್ಲಿ ಇಂತಹ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಬೃಹತ್ ಪ್ರಮಾಣದಲ್ಲಿ ತಯಾರಾಗಿ ಮಾರಾಟವಾಗುತ್ತಿವೆ. ನವ್‌ಭಾರತ್ ಟೈಮ್ಸ್ ವರದಿ ಪ್ರಕಾರ, ದೆಹಲಿಯಲ್ಲಿ ಮಾರಾಟವಾಗುವ ಶೇ.70 ರಷ್ಟು ಹೆಲ್ಮೆಟ್‌ಗಳು ನಕಲಿ ಎಂದು ಪತ್ತೆಯಾಗಿದೆ. ಅವು ಗುಣಮಟ್ಟ ಪರೀಕ್ಷೆಯಲ್ಲೂ ವಿಫಲವಾಗುತ್ತವೆ.

ಹೆಲ್ಮೆಟ್ ತಯಾರಕರ ಸಂಘವು ಸರ್ಕಾರಕ್ಕೆ ಪ್ರಮುಖ ಸಲಹೆ ನೀಡಿದ್ದು, ಪ್ರತಿಯೊಂದು ದ್ವಿಚಕ್ರ ವಾಹನದ ಮಾರಾಟದೊಂದಿಗೆ ಎರಡು ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅದರ ವೆಚ್ಚವನ್ನು ನೇರವಾಗಿ ವಾಹನದ ಬೆಲೆಯಲ್ಲಿ ಸೇರಿಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಮಾತ್ರ ಮೂಲ ಹೆಲ್ಮೆಟ್‌ಗಳು ಗ್ರಾಹಕರಿಗೆ ತಲುಪಲಿದ್ದು, “ನೋ ಹೆಲ್ಮೆಟ್, ನೋ ಇಂಧನ” ನಿಯಮ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ.

ಇದನ್ನೂ ಓದಿ