Monday, September 22, 2025

ಉಚ್ಚಾಟನೆ ಮಾಡೋ ಅಧಿಕಾರ ಯಾರಿಗೂ ಇಲ್ಲ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭಾನುವಾರ ಪಂಚಮಸಾಲಿ ಪೀಠದ ಟ್ರಸ್ಟ್ ಉಚ್ಚಾಟಿಸಿದ್ದರೆ.

ಶಾಸಕ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯ ಟ್ರಸ್ಟ್ ನ ಧರ್ಮದರ್ಶಿಗಳು ಸಭೆ ನಡೆಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠಾಧಿಪತಿ ಸ್ಥಾನದಿಂದ ಉಚ್ಚಾಟಿಸಿದ್ದರು.

ಇದಾದ ಬಳಿಕ ಇಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮಕ್ಕೆ ಆಗಮಿಸಿದ್ದು, ಸಂಗಮನಾಥ ದರುಶನ ಪಡೆದು, ಬಳಿಕ ಆಲದ ಮರದ ಕೆಳಗೆ ಭಕ್ತರ ಜೊತೆ ಸಭೆ ನಡೆಸಿದ್ದಾರೆ.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ನಮ್ಮನ್ನ ಉಚ್ಚಾಟನೆ ಮಾಡೋ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಪೀಠಕ್ಕೂ ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನ ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ ಎಂದರು.

ಎಲ್ಲರೂ ಹೇಗೆ ಹೇಳ್ತಾರೆ ಹಾಗೆ ಮಾಡ್ತೇನೆ. ಸೃಷ್ಠಿಕರ್ತ ಪರಮಾತ್ಮನಿಗೆ ಬಿಟ್ಟರೇ, ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪರಮಾತ್ಮನ ಸ್ವರೂಪಿಯಾದ ಭಕ್ತರಿಗೆ ಮಾತ್ರ ಉಚ್ಛಾಟನೆ ಅಧಿಕಾರ ಇದೆ. ನಾನು ಕೂಡಲಸಂಗಮದಲ್ಲೇ ಇರುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕೂಡಲಸಂಗಮ & ದಾವಣಗೆರೆಯಲ್ಲಿ ಭಕ್ತರು ಕೊಟ್ಟ ಜಾಗ ಮಾತ್ರ ನನ್ನ ಹೆಸರಲ್ಲಿದೆ. ಮತ್ತೆಲ್ಲೂ ನನ್ನ ಹೆಸರಲ್ಲಿ ಜಾಗ ಇಲ್ಲ. ಒಂದು ವೇಳೆ ಜಾಗ ಮಾಡಬೇಕು ಅಂತ ಮನಸ್ಸು ಮಾಡಿದ್ರೆ, ಜಿಲ್ಲೆಗೊಂದು ಅಲ್ಲ, ಪ್ರತಿ ಗ್ರಾಮಕ್ಕೊಂದು ಮಾಡುತ್ತಿದ್ದೆ ಎಂದರು.

ಇತ್ತೀಚಿನ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಕ್ರಿಯೇಟ್ ಮಾಡಿರಬಹುದು. ಅದಕ್ಕೆ ನಾವು ಹೆದರುವುದಿಲ್ಲ, ಕುಗ್ಗುವುದಿಲ್ಲ. ಈ ಘಟನೆಯಿಂದ ನನ್ನ ಭಕ್ತರಿಗೆ ನೋವಾಗಿದೆ. ನನ್ನ ಭಕ್ತರಿಗೆ ನೋವಾಗಿದೆ ಅಂತ ನನಗೆ ನೋವಾಗಿದೆಯೇ ವಿನಃ ಉಚ್ಛಾಟನೆ ಮಾಡಿದ್ರಲಾ ಅಂತ ನಾನು‌ ನೊಂದಿಲ್ಲ. ನಾನು ಇದೀಗ ಇನ್ನಷ್ಟು ಸ್ವತಂತ್ರನಾಗಿದ್ದೇನೆ ಎನ್ನುವ ಖುಷಿ ಇದೆ. ಪರ್ಯಾಯ ಪೀಠ ಕಟ್ಟಲ್ಲ, ಇದೇ ಪೀಠ ಇರುತ್ತೆ. ಟ್ರಸ್ಟ್ ಮಾತ್ರ ಅವರಿಗೆ ಸಂಬಂಧಿಸಿದ್ದು, ಇದೇ ಪೀಠ ಇರುತ್ತೆ. ಹೊಸ ಮಠ ಕಟ್ಟುವ ಬಗ್ಗೆ ಹಿರಿಯರ ಸಭೆ ಕರೆಯುತ್ತೇನೆ. ನಂತರ ರಾಜ್ಯ ಮಟ್ಟದ ಭಕ್ತರ ಸಭೆ ಕರೆದು, ಅವ್ರು ಏನ್ ಹೇಳ್ತಾರೆ ಅದನ್ನ ಮಾಡ್ತೇನೆ. ಭಕ್ತರ ನಿರ್ಧಾರವೇ ಅಂತಿಮ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ