Tuesday, September 30, 2025

ಉತ್ತರ ಕರ್ನಾಟಕ ಪ್ರವಾಹ, ಸಾವು-ನೋವು: ಸಚಿವರುಗಳ ಗೈರಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಬೀದರ್ ನಲ್ಲಿ ಪ್ರವಾಹ ಬಂದು ಸಾವು-ನೋವು ಉಂಟಾಗಿದ್ದರೂ, ಈವರೆಗೆ ಯಾವುದೇ ಸಚಿವರು ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಮಳೆಯಿಂದ ಹಾನಿಗೊಳಗಾದ ಬಾಧಿತರಿಗೆ ಹೆಚ್ಚಿನ ಪರಿಹಾರ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ, ಸಚಿವರು ಹಾಗೂ ಮುಖ್ಯಮಂತ್ರಿಗಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಹಣ ನೀಡುತ್ತದೆ. ರಾಜ್ಯ ಸರ್ಕಾರ ತಕ್ಷಣ 3 ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿ, ವಿತರಣೆ ಮಾಡುವ ಕೆಲಸ ಮಾಡಬೇಕು . ಮಳೆ ಹಾನಿ, ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡಲಾಗಿದೆ ಎನ್ನುವುದನ್ನು ಸರ್ಕಾರ ಪ್ರಕಟಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಜಾತಿ ಗಣತಿಯ ಕಡೆಗೆ ಗಮನಹರಿಸಿದೆ. ಹೀಗಾಗಿ ಬೆಳೆ ಹಾನಿ, ರೈತರ ಕಡೆ ಗಮನಹರಿಸುತ್ತಿಲ್ಲ. ಜಾತಿ ಸಮೀಕ್ಷೆಯಲ್ಲಿ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಹೆಚ್ಚು ತೋರಿಸಲು ಪ್ರಯತ್ನ ನಡೆಸತ್ತಿದ್ದಾರೆ. ಸಮೀಕ್ಷೆಗೆ ಯಾವುದೇ ಪೂರ್ವ ತಯಾರಿ ನಡೆಸಿಲ್ಲ. ಕೇವಲ 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದರು. ಹಬ್ಬದ ಸಮಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ , ಜನರ ಮೇಲೆ ಬರೆ ಎಳೆದಿದೆ. ವಿವಿಧ ಭ್ರಷ್ಟಚಾರದ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.