Wednesday, September 24, 2025

ಒಂದು ಗುಂಡಿಯಿಂದ ಒಂದೂವರೆ ಲಕ್ಷ ಖರ್ಚಾಯ್ತು! ಈಗ್ಲಾದ್ರೂ ರಸ್ತೆ ಸರಿ ಆಗತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಗುಂಡಿಗಳ ಕಾರುಬಾರು ಹೆಚ್ಚಾಗ್ತಿದೆ. ನಿತ್ಯ ಗುಂಡಿಗಳಿಂದ ವಾಹನ ಸವಾರರು ನರಕ ಅನುಭವಿಸ್ತಿದ್ದಾರೆ. ಮಹಾದೇವಪುರ ರಸ್ತೆ ಗುಂಡಿಗೆ ಬಿದ್ದ ಮಹಿಳೆ ಕುಟುಂಬಸ್ಥರು ಒಂದೂವರೆ ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಿದ್ದಾರೆ.

ಮಂಜುಳಾ (39) ಎಂಬ ಮಹಿಳೆ ರಸ್ತೆ ಗುಂಡಿಗೆ ಬಿದ್ದು, ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ಗುಂಡಿಯಿಂದ ಒಂದೂವರೆ ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಿ ನೊಂದಿರುವ ಕುಟುಂಬಸ್ಥರು ದಯವಿಟ್ಟು ಗುಂಡಿಗಳನ್ನು ಮುಚ್ಚಿ, ಜನ್ರ ಜೀವಗಳನ್ನ ಉಳಿಸಿ ಅಂತ ಸಿಎಂ, ಡಿಸಿಎಂಗೆ ಮನವಿ ಮಾಡಿದ್ದಾರೆ.

ರ‍್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ಮಂಜುಳಾ ಪ್ರಯಾಣ ಮಾಡ್ತಿದ್ರು. ಕೆ.ಆರ್ ಪುರಂ ರೈಲ್ವೆ ಸ್ಟೇಷನ್ ಕಡೆಯಿಂದ ಕಾರ್ತಿಕ ನಗರ ಕಡೆ ತೆರಳುವ ವೇಳೆ ಗುಂಡಿಯಲ್ಲಿ ಬೈಕ್ ಬಿದ್ದಿದೆ. ಈ ವೇಳೆ ಹಿಂದೆ ಕೂತಿದ್ದ ಮಂಜುಳಾ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. 

ಕೂಡಲೇ ರ‍್ಯಾಪಿಡೋ ಬೈಕ್ ಚಾಲಕ ಧರ್ಮಿಚಂದ ಶಿರ್ವಿ ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ರಕ್ತ ಹೆಪ್ಪುಗಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ, ಒಂದು ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಿಳೆಯು ಮನೆಯವರನ್ನೇ ಸರಿಯಾಗಿ ಗುರುತು ಹಿಡಿಯತ್ತಿಲ್ಲ ಎನ್ನುತ್ತಿದ್ದಾರೆ.

ಒಂದು ಗುಂಡಿಯಿಂದ ಇಷ್ಟೆಲ್ಲಾ ಸಮಸ್ಯೆ ಆಗ್ತಿದೆ. ಆಸ್ಪತ್ರೆಯ ಬಿಲ್‌ ಕೂಡ ಒಂದೂವರೆ ಲಕ್ಷದಷ್ಟಾಗಿದೆ. ಆದರೂ ಆರೋಗ್ಯ ಸ್ಥಿತಿಯೂ ಸುಧಾರಿಸಿಲ್ಲ. ಜನರ ಬಲಿ ಪಡೆದ ನಂತರವೇ ಗುಂಡಿಗಳನ್ನು ಮುಚ್ಚೋದಾ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ