Wednesday, November 26, 2025

ಆನ್‌ಲೈನ್ ಹೂಡಿಕೆ ವಂಚನೆ: ಟ್ರೇಡಿಂಗ್, ಶೇರು ಕಂಪನಿ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಹೂಡಿಕೆಗಳ ಮೂಲಕ ಅಧಿಕ ಲಾಭದ ಆಮಿಷ ಒಡ್ಡಿ ವಂಚಕರು ಜನರನ್ನು ತಮ್ಮ ಬಲೆಗೆ ಕೆಡವುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಹೂಡಿಕೆದಾರರೊಬ್ಬರು ಟ್ರೇಡಿಂಗ್ ಕಂಪನಿಗಳ ಹೆಸರಿನಲ್ಲಿ ಬರೋಬ್ಬರಿ ₹42.51 ಲಕ್ಷ ರೂ. ಕಳೆದುಕೊಂಡರೆ, ಮತ್ತೊಬ್ಬ ಶಿಕ್ಷಕರು ಶೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಸೆಗೆ ಬಿದ್ದು ₹11.93 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಚಿನ್ನಾಭರಣ ಅಡವಿಟ್ಟು ವಂಚನೆಗೆ ಬಲಿಯಾದ ರಿಪೇರಿ ಕೆಲಸಗಾರ

ನಗರದ ಕೆ.ಬಿ. ಬಡಾವಣೆಯ ನಿವಾಸಿಯೊಬ್ಬರು ಮೊಬೈಲ್ ರಿಪೇರಿ ಕೆಲಸದಿಂದ ಜೀವನ ಸಾಗಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿ ಕಂಡ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿದ್ದು ಇವರ ಪಾಲಿಗೆ ದುಬಾರಿಯಾಗಿದೆ. ಲಿಂಕ್ ಒತ್ತಿದ ನಂತರ, ಅಪರಿಚಿತರು ವಾಟ್ಸಾಪ್ ಮೂಲಕ ಸಂಪರ್ಕಿಸಿ, ಟ್ರೇಡಿಂಗ್ ಕಂಪನಿಯೊಂದರಲ್ಲಿ ಬಂಡವಾಳ ಹೂಡಿದರೆ ಭಾರಿ ಲಾಭಾಂಶ ಪಡೆಯಬಹುದು ಎಂದು ನಂಬಿಸಿದ್ದಾರೆ.

ಈ ಆಮಿಷಕ್ಕೆ ಒಳಗಾದ ವ್ಯಕ್ತಿ, ತಾವು ದುಡಿದ ಹಣದ ಜೊತೆಗೆ, ಪತ್ನಿ, ತಂಗಿ ಮತ್ತು ತಾಯಿಯ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಮಾಡಿ, ಆನ್‌ಲೈನ್ ಮೂಲಕ ವಂಚಕರ ಖಾತೆಗೆ ಒಟ್ಟು ₹42.51 ಲಕ್ಷ ರೂ. ಜಮೆ ಮಾಡಿದ್ದಾರೆ. ಆದರೆ, ಹೂಡಿಕೆ ಮಾಡಿದ ಹಣ ವಾಪಸ್ಸು ಬಾರದೇ ಇದ್ದಾಗ ತಾವು ವಂಚನೆಗೊಳಗಾಗಿರುವುದು ಇವರಿಗೆ ಅರಿವಾಗಿದೆ.

ಶೇ. 300ರಷ್ಟು ಲಾಭದ ಭರವಸೆಗೆ ಶಿಕ್ಷಕ ಬಲಿ

ಇದೇ ಮಾದರಿಯಲ್ಲಿ, ಹೊನ್ನಾಳಿಯ ಶಿಕ್ಷಕರೊಬ್ಬರನ್ನು ಸಂಪರ್ಕಿಸಿದ ವಂಚಕರು, ಹೊಸ ಕಂಪನಿಗಳಲ್ಲಿ ಶೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇ.300ರಷ್ಟು ಅದ್ಭುತ ಲಾಭ ಗಳಿಸಬಹುದು ಎಂದು ಭರವಸೆ ನೀಡಿದ್ದಾರೆ. ಈ ಅಧಿಕ ಲಾಭದ ಆಸೆಗೆ ಬಲಿಯಾದ ಶಿಕ್ಷಕರು, ಹಂತ ಹಂತವಾಗಿ ಆನ್‌ಲೈನ್ ಮೂಲಕ ವಂಚಕರು ನೀಡಿದ ಬ್ಯಾಂಕ್ ಖಾತೆಗೆ ₹11.93 ಲಕ್ಷ ರೂ. ಜಮಾ ಮಾಡಿದ್ದಾರೆ.

ಸಂಪೂರ್ಣ ಹಣ ವಂಚಕರ ಕೈಸೇರಿದ ನಂತರ, ಇಬ್ಬರೂ ಹೂಡಿಕೆದಾರರಿಗೆ ತಮ್ಮ ಹಣ ಹಿಂತಿರುಗಲಿಲ್ಲ. ಈ ಎರಡೂ ಪ್ರಕರಣಗಳು ನಗರದ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!