ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಲ್ಲಿ ವಲಸಿಗರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ದಿಸ್ಪುರದ ಲೋಕಸೇವಾ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಗಡಿಯಲ್ಲಿ ನಿರಂತರ ಒತ್ತಡವಿದೆ. ವಲಸಿಗರ ವಾಪಸಾತಿ ಎರಡು ರೀತಿಯಲ್ಲಿ ನಡೆಯುತ್ತಿದೆ. ಒಂದು ಅವರು ಗಡಿಯನ್ನು ಪ್ರವೇಶಿಸಿದ ತಕ್ಷಣ ವಾಪಸ್ ಕಳುಹಿಸುವುದು. ಇನ್ನೊಂದು 1971ರ ನಂತರ ಬಂದವರನ್ನು ಗುರುತಿಸಿ ವಾಪಸ್ ಕಳುಹಿಸುವುದು. ಈ ಎರಡೂ ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ಮುಂದುವರಿಯುತ್ತವೆ ಎಂದಿದ್ದಾರೆ.
ನಿನ್ನೆ ಸುಮಾರು 26 ವಲಸಿಗರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ.
ಈ ಕುರಿತು ಶನಿವಾರ ಸಾಮಾಜಿಕ ಜಾಲತಾಣದಲ್ಲಿಯೂ ಪ್ರತಿಕ್ರಿಯಿಸಿದ ಅವರು, ‘ಗಡಿಯಲ್ಲಿ ವಲಸಿಗರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಇತ್ತೀಚೆಗೆ 33 ವಲಸಿಗರನ್ನು ಅವರ ತಾಯ್ನಾಡಾದ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ನೆನಪಿಡಿ; ನಮ್ಮ ಕಠಿಣ ಪರಿಶ್ರಮ ಮುಂದುವರೆದಿದೆ ಮತ್ತು ಮುಂದಿನ ದಿನಗಳಲ್ಲಿ ಈ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ.