ಹೊಸದಿಗಂತ ಡಿಜಿಟಲ್ ಡೆಸ್ಕ್;
ವಿಧಾನ ಪರಿಷತ್ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ತಿರಸ್ಕೃತಗೊಂಡಿದೆ.
ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿರುದ್ಧ 26 ಮತಗಳು ಬಂದವು, ಪರ 23 ಮತಗಳು ಬಂದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ತಿರಸ್ಕೃತಗೊಂಡಿದೆ.
ಬುಧವಾರ (ಆ.20) ಕಾನೂನು ಸಚಿವ ಹೆಚ್ಕೆ ಪಾಟೀಲ್ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಷತ್ನಲ್ಲಿ ಮಂಡಿಸಿದರು. ಆಗ, ವಿಪಕ್ಷಗಳು ವಿಧೇಯಕವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದವು. ಬಳಿಕ, ಸಭಾಪತಿ ಬಸವರಾಜ ಹೊರಟ್ಟಿಯವರು ವಿಧೇಯಕವನ್ನು ಮತಕ್ಕೆ ಹಾಕಲು ಮುಂದಾದರು.
ಮತಕ್ಕೆ ಹಾಕುವ ಮೊದಲು ಎದ್ದು ನಿಂತ ಹೆಚ್ಕೆ ಪಾಟೀಲ್, ಇದು ವಿರೋಧ ಪಕ್ಷಗಳ ಘನತೆಗೆ ಇದು ತಕ್ಕದ್ದಲ್ಲ. ಇದೊಂದು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ನಾನು ಎಲ್ಲ ಉತ್ತರ ಕೊಟ್ಟಮೇಲೂ, ಮತಕ್ಕೆ ಹಾಕುವುದು ಅನವಶ್ಯಕವಾಗಿದೆ. ರಾಜಕಾರಣ ತರುವಂಥದ್ದು ಸರಿಯಲ್ಲ ಎಂದು ಹೇಳಿದರು.
ನಂತರ, ಸಭಾಪತಿ ಬಸವರಾಜ್ ಹೊರಟ್ಟಿಯವರು ಮತಕ್ಕೆ ಹಾಕಬೇಕಾ? ಬೇಡವಾ? ಎಂದು ಮತ್ತೊಮ್ಮೆ ಕೇಳಿದರು. ವಿಪಕ್ಷಗಳು ಮತಕ್ಕೆ ಹಾಕುವಂತೆ ಹೇಳಿದ ಮೇಲೆ, ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದರು. ಆಗ, ವಿಧೇಯಕದ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಬಂದವು. ಈ ಕಾರಣದಿಂದ ವಿಧೇಯಕ ತಿರಸ್ಕೃತಗೊಂಡಿತು.