ಶುಭಾಂಶು ಶುಕ್ಲಾ ಸಾಹಸದ ಕುರಿತ ಚರ್ಚೆಗೆ ಭಾಗವಹಿಸದ ವಿಪಕ್ಷಗಳು: ಇದು ಅತ್ಯಂತ ದುರದೃಷ್ಟಕರ ಎಂದ ರಾಜನಾಥ್‌ ಸಿಂಗ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭೆಯಲ್ಲಿ‌ ಇಂದು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಸಾಹಸದ ಕುರಿತು ಚರ್ಚೆ ನಡೆದಿದ್ದು, ಆದ್ರೆ ಈ ಸಂದರ್ಭ ವಿಪಕ್ಷಗಳು ತೋರಿದ ವರ್ತನೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತೀವ್ರವಾಗಿ ಖಂಡಿಸಿದ್ದಾರೆ.

ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾತ್ರೆ ಮತ್ತು ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತು, ಲೋಕಸಭೆಯಲ್ಲಿ ಚರ್ಚೆ ನಿಗದಿಪಡಿಸಲಾಗಿತ್ತು. ಆದರೆ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸುವುದನ್ನು ಬಿಟ್ಟು, ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ಮಾಡಲಾರಂಭಿಸಿದರು.

ಇಂದು ಬೆಳಿಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ‘ಸಂಸತ್ತು ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಪ್ರಯಾಣದ ಕುರಿತು ವಿಶೇಷ ಚರ್ಚೆಯನ್ನು ನಡೆಸುವ ಮೂಲಕ ಅವರನ್ನು ಗೌರವಿಸುತ್ತದೆ ಎಂದು ಹೇಳಿದ್ದರು. ವಿರೋಧ ಪಕ್ಷದ ಸಹಕಾರ ಕೋರಿದ್ದ ಕಿರಣ್‌ ರಿಜಿಜು, ‘ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರೀಯ ನಾಯಕನ ಸಾಧನೆಯನ್ನು ಆಚರಿಸೋಣ’ಎಂದು ಮನವಿ ಮಾಡಿದ್ದರು.

ಆದ್ರೆ ಶುಭಾಂಶು ಶುಕ್ಲಾ ಅವರ ಕುರಿತ ಚರ್ಚೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ವಿಪಕ್ಷ ಸದಸ್ಯರ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ಇದು ಅತ್ಯಂತ ದುರದೃಷ್ಟಕರ ಮತ್ತು ನಿರಾಶಾದಾಯಕ’ ಎಂದು ಬಣ್ಣಿಸಿದ್ದಾರೆ.

ಬಾಹ್ಯಾಕಾಶದಂತಹ ವಿಷಯಗಳನ್ನು ಪಕ್ಷಪಾತ ರಾಜಕೀಯಕ್ಕಿಂತ ಮೇಲಿಡಬೇಕು . ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಚರ್ಚೆಯು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು 2047ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕಸಿತ ಭಾರತದ ಪಾತ್ರ ಎಂಬ ವಿಷಯದ ಮೇಲೆ ನಡೆಯುತ್ತಿತ್ತು. ಇದು ರಾಷ್ಟ್ರೀಯ ಸಾಧನೆ, ದೇಶದ ಹೆಮ್ಮೆ, ಸ್ವಾಭಿಮಾನ ಮತ್ತು ಭವಿಷ್ಯದಲ್ಲಿ ವೈಜ್ಞಾನಿಕ ಮತ್ತು ರಾಷ್ಟ್ರೀಯ ಭದ್ರತೆಯ ನಿರೀಕ್ಷೆಗಳಿಗೆ ಸಂಬಂಧಿಸಿದೆ. ಪ್ರತಿಪಕ್ಷಗಳು ಅದನ್ನು ತಡೆದ ರೀತಿ, ಇಂದಿನ ಅವರ ನಡವಳಿಕೆ ಅತ್ಯಂತ ನಿರಾಶಾದಾಯಕವಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತಲುಪುತ್ತಿರುವ ಅಭೂತಪೂರ್ವ ಎತ್ತರಗಳು ಗಮನಾರ್ಹವಾಗಿವೆ. ವಿರೋಧ ಪಕ್ಷವು ಚರ್ಚೆಯಲ್ಲಿ ಭಾಗವಹಿಸಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ರಚನಾತ್ಮಕ ವಿಮರ್ಶೆ, ಟೀಕೆ ಮತ್ತು ಸಲಹೆಗಳನ್ನು ನೀಡಬಹುದಿತ್ತು ಎಂದು ರಾಜನಾಥ್‌ ಸಿಂಗ್‌ ಖೇದ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!