Thursday, September 18, 2025

ಹಿಂದು ಧಾರ್ಮಿಕತೆಯ ಮೇಲಿನ ದಬ್ಬಾಳಿಕೆ ಸಹಿಸಲ್ಲ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಹೊಸ ದಿಗಂತ ವರದಿ,ಚಿತ್ರದುರ್ಗ :

ಪ್ರತಿ ವರ್ಷವೂ ದಸರಾ ಹಬ್ಬಕ್ಕಾಗಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸುತ್ತದೆ. ಕ್ರಿಶ್ಚಿಯನ್ ಶಾಲೆಯವರು ಹಬ್ಬದ ರಜೆಗಳನ್ನು ಕಡಿತಗೊಳಿಸಿ ಕ್ರಿಸ್‌ಮಸ್ ಹಬ್ಬಕ್ಕೆ ನೀಡುತ್ತ ಹಿಂದು ಧಾರ್ಮಿಕ ಹಬ್ಬಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಕ್ರಿಶ್ಚಿಯನ್ ಶಾಲೆಗಳ ಗೇಟ್‌ಗಳಿಗೆ ಬೀಗ ಹಾಕುತ್ತೇವೆಂದು ಶ್ರೀರಾಮಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬದ ರಜೆಯನ್ನು ಕ್ರಿಶ್ಚಿಯನ್ ಕಾನ್ವೆಂಟ್‌ಗಳು ಮೊಟಕುಗೊಳಿಸಿ ಮಕ್ಕಳಿಗೆ ಪಾಠ ಹೇಳುವುದರ ಜೊತೆ ಪರೀಕ್ಷೆಗಳನ್ನು ಘೋಷಿಸುತ್ತವೆ. ಶೇ.೯೦ ರಷ್ಟು ಹಿಂದು ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರು, ಸಿಬ್ಬಂದಿಗಳು ಕೂಡ ಹಿಂದುಗಳಿದ್ದಾರೆ. ದಸರಾ ಇನ್ನಿತರೆ ಹಬ್ಬಗಳನ್ನು ಹಿಂದುಗಳು ಶಾಸ್ತ್ರೋಕ್ತ ವೈಜ್ಞಾನಿಕವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸಾಮರಸ್ಯ ಮೂಡಿಸುವ ಹಬ್ಬಗಳನ್ನು ಕ್ರಿಶ್ಚಿಯನ್ನರು ಹತ್ತಿಕ್ಕಲು ನಾವುಗಳು ಬಿಡುವುದಿಲ್ಲ. ಈ ಸಂಬಂಧ ಶಿಕ್ಷಣ ಮಂತ್ರಿಗಳಿಗೆ, ಇಲಾಖೆಯ ಉಪ ನಿರ್ದೇಶಕರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಹಿಂದುಗಳನ್ನು ನೇರವಾಗಿ ಮತಾಂತರಗೊಳಿಸದಿದ್ದರೂ ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಕ್ರಿಶ್ಚಿಯನ್ ಶಾಲೆಗಳಲ್ಲಿ ಮತಾಂತರವಾಗುತ್ತಿದೆ. ಬಸವಣ್ಣ, ಗಾಂಧಿ, ಅಂಬೇಡ್ಕರ್ ಫೋಟೋಗಳನ್ನು ಶಾಲೆಯಲ್ಲಿಡಬೇಕು. ಯಾವ ಕ್ರಿಶ್ಚಿಯನ್ ಶಾಲೆಗಳಲ್ಲಿಯೂ ಈ ಮೂವರು ಮಹನೀಯರ ಫೋಟೋಗಳಿಲ್ಲ. ರಾಜ್ಯೋತ್ಸವ ಕೂಡ ಆಚರಣೆ ಮಾಡಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ಮೆರವಣಿಗೆ ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಮುಗಿಯಿತು. ಡಿಜೆ.ವಾಹನ ಮಾಲೀಕರುಗಳ ವಿರುದ್ದ ಕೇಸ್ ಹಾಕಿರುವುದನ್ನು ಪ್ರಶ್ನಿಸಿದರೆ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉತ್ತರ ನೀಡುತ್ತಿದ್ದಾರೆ. ದಿನಕ್ಕೆ ಐದು ಬಾರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದರಿಂದ ಶಬ್ಬ ಬರುವುದಿಲ್ಲವೇ. ಹಿಂದುಗಳಿಗೊಂದು, ಮುಸಲ್ಮಾನರಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದ ಪ್ರಮೋದ್ ಮುತಾಲಿಕ್ ಸುಮೋಟೋ ಕೇಸು ದಾಖಲಿಸಿ ಬೆಳಗಿನ ಜಾವ ೪-೩೦ ಕ್ಕೆ ಅಲ್ಲಾ ಕೂಗುವುದನ್ನು ನಿಲ್ಲಿಸಬೇಕು. ಹಿಂದುಗಳ ಮೇಲೆ ದಬ್ಬಾಳಿಕೆ ಸರಿಯಲ್ಲ. ಚಿತ್ರದುರ್ಗದ ಗೋನೂರು ಸಮೀಪ ದಲಿತ ವಿದ್ಯಾರ್ಥಿನಿಯ ಹತ್ಯೆಯಾಗಿರುವುದನ್ನು ಖಂಡಿಸುತ್ತೇನೆ. ಕಾಮುಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಸೈಟ್‌ಬಾಬಣ್ಣ, ಸುಂದರೇಶ್ ನಾಡಗಲ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ