Thursday, November 27, 2025

ನಮ್ಮ ಮೆಟ್ರೋದಲ್ಲಿ ಅಂಗಾಂಗ ರವಾನೆ: ಜೀವ ಉಳಿಸಲು ನೆರವಾಯ್ತು ಬಿಎಂಆರ್‌ಸಿಎಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಂಗಾಂಗಳನ್ನು ಆ್ಯಂಬುಲೆನ್ಸ್‌ ಮೂಲಕವೇ ಸಾಗಣೆ ಮಾಡುವುದುಂಟು. ಆದರೆ, ಇತ್ತೀಚಿನ ಸಂಚಾರ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್‌ ಗಳೂ ರಸ್ತೆಯಲ್ಲಿ ಶೀಘ್ರಗತಿಯಲ್ಲಿ ಸಂಚಾರ ನಡೆಸುವುದು ಕಷ್ಟಕರವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ನಮ್ಮ ಮೆಟ್ರೋ ಸೌಕರ್ಯ ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಇದರಂತೆ ಗುರುವಾರ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಹೃದಯ ಮತ್ತು ಶ್ವಾಸಕೋಶ ಸಾಗಣೆ ಮಾಡಲಾಗಿದೆ. ಇದರಿಂದ ಜೀವವೊಂದು ಉಳಿದಂತಾಗಿದೆ. ಒಂದು ಶ್ವಾಸಕೋಶ ಮತ್ತು ಹೃದಯವನ್ನ ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಯಿಂದ ನಾರಾಯಣ ಹೆಲ್ತ್‌ ಸಿಟಿ ಮತ್ತು ಆಸ್ಟರ್‌ ಆರ್‌ವಿ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲೇ ಕೊಂಡೊಯ್ಯಲಾಗಿದೆ.

ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಮೆಟ್ರೋ ರೈಲಿನ ಒಂದು ಭೋಗಿಯಲ್ಲಿ ಶ್ವಾಸಕೋಶ-ಹೃದಯ ತುಂಬಿದ ವೈದ್ಯಕೀಯ ಬಾಕ್ಸ್‌ ಇಟ್ಟುಕೊಂಡು, ಆಸ್ಪತ್ರೆಯ ಸಿಬ್ಬಂದಿ ಸಂಚರಿಸಿದ್ದಾರೆ.ಎರಡು ಆಸ್ಪತ್ರೆಗಳ ನಡುವಿನ ಸುಮಾರು 30-33 ಕಿಮೀ ದೂರವನ್ನ ಕೇವಲ 61 ನಿಮಿಷದಲ್ಲಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಶ್ವಾಸಕೋಶ ಕಸಿ ಮಾಡುವ ಐವರು ಸಿಬ್ಬಂದಿಯೊಂದಿಗೆ ಬಿಎಂಆರ್‌ಸಿಎಲ್ ಹೋಮ್‌ ಗಾರ್ಡ್‌ಗಳೂ ಇದ್ದರು.

ಏತನ್ಮಧ್ಯೆ ಸಮನ್ವಯ ಮತ್ತು ಸಹಾಯಕ್ಕಾಗಿ ನಾರಾಯಣ ಹೆಲ್ತ್ ಆಸ್ಪತ್ರೆಯು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದೆ.

error: Content is protected !!