ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ವೇದಿಕೆಗಳಲ್ಲಿ ಸೆಲೆಬ್ರಿಟಿಗಳ ಹೆಸರು, ಫೋಟೋ ಮತ್ತು ಗುರುತನ್ನು ವಾಣಿಜ್ಯ ಉದ್ದೇಶಕ್ಕೆ ದುರ್ಬಳಕೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಪ್ಯಾನ್ ಇಂಡಿಯಾ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಅನುಮತಿಯಿಲ್ಲದೆ ಇ–ಕಾಮರ್ಸ್ ವೆಬ್‌ಸೈಟ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳು ತಮ್ಮ ಹೆಸರು, ಚಿತ್ರ, ವಿಡಿಯೋ ಮತ್ತು ಹೋಲಿಕೆಯನ್ನು ಬಳಸಿ ಲಾಭ ಪಡೆಯುತ್ತಿವೆ ಎಂದು ಆರೋಪಿಸಿ ಜೂ.ಎನ್‌ಟಿಆರ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಈ ಮೊಕದ್ದಮೆಯನ್ನು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ವಿಚಾರಣೆ ನಡೆಸಿದ್ದು, ನಟರ ಪರವಾಗಿ ಹಿರಿಯ ವಕೀಲ ಜೆ. ಸಾಯಿ ದೀಪಕ್ ವಾದ ಮಂಡಿಸಿದರು. ಐಟಿ ನಿಯಮಗಳು–2021ರ ಅಡಿಯಲ್ಲಿ ಇದನ್ನು ಔಪಚಾರಿಕ ದೂರಾಗಿ ಪರಿಗಣಿಸುವಂತೆ ನ್ಯಾಯಾಲಯ ಸಾಮಾಜಿಕ ಜಾಲತಾಣಗಳು ಮತ್ತು ಕೆಲ ವೆಬ್‌ಸೈಟ್‌ಗಳಿಗೆ ಸೂಚನೆ ನೀಡಿದೆ. ಸಂಬಂಧಿತ ಕಂಪನಿಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ನಿಗದಿಪಡಿಸಿದ್ದು, ವಿವರವಾದ ಆದೇಶ ಹೊರಬೀಳುವ ಸಾಧ್ಯತೆ ಇದೆ. ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಚಿರಂಜೀವಿ, ನಾಗಾರ್ಜುನ ಸೇರಿದಂತೆ ಹಲವರು ಈಗಾಗಲೇ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

