ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಹಸ ಕ್ರೀಡೆಗೆ ಪ್ರಸಿದ್ಧವಾಗಿರುವ ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್‌ನಲ್ಲಿ ದುರ್ಘಟನೆ ಸಂಭವಿಸಿದೆ. ಕಾಂಗ್ರಾ ಜಿಲ್ಲೆಯ ಈ ಜನಪ್ರಿಯ ಪ್ಯಾರಾಗ್ಲೈಡಿಂಗ್ ಕೇಂದ್ರದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟಂಡೆಮ್ ಪ್ಯಾರಾಗ್ಲೈಡರ್ ತಾಂತ್ರಿಕ ದೋಷಕ್ಕೆ ಒಳಗಾಗಿ ಪತನಗೊಂಡಿದ್ದು, ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಗಾಳಿಯಲ್ಲಿ ಹಾರಾಟ ಆರಂಭಿಸಿದ ತಕ್ಷಣವೇ ಪ್ಯಾರಾಗ್ಲೈಡರ್ ಸಮತೋಲನ ಕಳೆದುಕೊಂಡು ಉಡಾವಣಾ ಸ್ಥಳದ ಕೆಳಭಾಗದಲ್ಲಿರುವ ರಸ್ತೆಯ ಬಳಿ ಬಿದ್ದಿದೆ. ಈ ಅಪಘಾತದಲ್ಲಿ ಪೈಲಟ್ ಗಂಭೀರವಾಗಿ ಗಾಯಗೊಂಡರೆ, ಜೊತೆಗಿದ್ದ ಪ್ರವಾಸಿಗನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಧಾವಿಸಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರೂ, ಮಾರ್ಗಮಧ್ಯೆ ಪೈಲಟ್ ಮೃತಪಟ್ಟಿದ್ದಾರೆ. ಮೃತ ಪೈಲಟ್ ಮಂಡಿ ಜಿಲ್ಲೆಯ ಬರೋಟ್ ನಿವಾಸಿ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಬಿರ್ ಬಿಲ್ಲಿಂಗ್‌ನಲ್ಲಿ ಎಲ್ಲಾ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

