ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಿಸಿದ ಕೂಡಲೇ ಮೂವರು ಕಂದಮ್ಮಗಳು ಇಹಲೋಕ ತ್ಯಜಿಸಿವೆ. ಇದಕ್ಕೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಪೋಷಕರ ನಿರ್ಲಕ್ಷ್ಯ ಮತ್ತು ಸೂಕ್ತ ತಪಾಸಣೆ, ಪೋಷಣೆ ಕೊರತೆಯಿಂದ ಮೂರು ನವಜಾತ ಶಿಶುಗಳು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತ ಶಿಶುಗಳು ಆನಂದ ಮತ್ತು ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಎಂಬುದು ತಿಳಿದುಬಂದಿದೆ. ಪ್ರೀತಿಸಿ ವಿವಾಹವಾದ ಈ ದಂಪತಿ ಕುಟುಂಬದವರಿಂದ ದೂರವಾಗಿ ವಾಸ ಮಾಡುತ್ತಿತ್ತು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಏಪ್ರಿಲ್‌ನಲ್ಲಿ ಮಂಜುಳಾ ತಾಯಿ ಕಾರ್ಡ್ ಮಾಡಿಸಿಕೊಂಡಿದ್ದರು. ಆದರೆ ಕುಟುಂಬ ಕಲಹ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಿಣಿಯಾಗಿದ್ದ ಅವಧಿಯಲ್ಲಿ ಅಗತ್ಯ ತಪಾಸಣೆಗಳಿಗೆ ಹೋಗಿರಲಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯ ಆಶಾ ಕಾರ್ಯಕರ್ತೆಯರು ಹಲವು ಬಾರಿ ತಪಾಸಣೆಗೆ ಕರೆಸಿದ್ದರೂ, ತಪಾಸಣೆ ಮಾಡಿಕೊಂಡಿದ್ದಾಗಿ ತಿಳಿಸಿ ದಂಪತಿ ನುಣುಚಿಕೊಂಡಿದ್ದರು.
ಕಳೆದ ಶನಿವಾರ ಮಂಜುಳಾಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಹೆರಿಗೆ ಮಾಡಿಸಲಾಗಿತ್ತು. ತ್ರಿವಳಿ ಶಿಶುಗಳು ಜನಿಸಿದ್ದವು. ದುರದೃಷ್ಟವಶಾತ್, ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ಮೂರು ಶಿಶುಗಳೂ ಮೃತಪಟ್ಟಿವೆ.
ಪೋಷಕರ ನಿರ್ಲಕ್ಷ್ಯ? ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು
