Wednesday, November 5, 2025

Viral | ಬೇರೆಯವರು ಹೇಳೋಹಾಗೆ ‘ಪಟ್ನಾ ಅಷ್ಟು ಹಿಂದುಳಿದಿಲ್ಲ’: ವಿದೇಶಿ ವ್ಲಾಗರ್‌ ಬಾಯಿಂದ ಬಂತು ಮುತ್ತಿನಂತ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಅನುಭವಿಸಲು ದೇಶದಾದ್ಯಂತ ಸಂಚರಿಸುತ್ತಿರುವ ಆಸ್ಟ್ರೇಲಿಯಾದ ವ್ಲಾಗರ್‌ ಫೋಜಿ ಭಾಯಿ (Fozzie Bhai) ಬಿಹಾರದ ಬಗ್ಗೆ ಸಾಮಾನ್ಯವಾಗಿ ಹರಡಿರುವ ನಂಬಿಕೆಗಳ ವಿರುದ್ಧ ಮಾತನಾಡಿದ್ದಾರೆ. ಫುಡ್ ಕಂಟೆಂಟ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾದ ಫೋಜಿ ಭಾಯಿ ಇತ್ತೀಚೆಗೆ ಪಟ್ನಾದ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ನಗರವನ್ನು ಹಲವರು ಚಿತ್ರಿಸುವಂತೆ ಅಷ್ಟು ಹಿಂದುಳಿದ ನಗರವಲ್ಲ ಎಂದು ಹೇಳಿದ್ದಾರೆ.

“ಇಂಡಿಯಾ ಅಷ್ಟು ಅಶುದ್ಧವೇ? ಕೆಲ ವಿದೇಶಿ ಟ್ರಾವೆಲ್‌ ವ್ಲಾಗರ್‌ಗಳು ತೋರಿಸುವ ರೀತಿಯಲ್ಲಿದೆಯಾ? ನಾನು ಭಾರತದಲ್ಲಿ ಎರಡು ವರ್ಷ ಕಳೆದಿದ್ದೇನೆ, ಆದರೆ ಅವರು ತೋರಿಸುವಂತಹ ಕಪ್ಪು-ಬಿಳುಪು ದೃಶ್ಯ ಇಲ್ಲಿ ಇಲ್ಲ,” ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ವೈರಲ್‌ ಆಗಿರುವ ಆ ವಿಡಿಯೋದಲ್ಲಿ ಫೋಜಿ ಭಾಯಿ ಪಟ್ನಾದ ಬೀದಿಗಳಲ್ಲಿ ನಡೆಯುತ್ತಾ ಸ್ಥಳೀಯರೊಂದಿಗೆ ಮಾತನಾಡಿ, ನಗರದ ವಾಸ್ತವ ಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. “ನಗರ ತುಂಬಾ ಸ್ವಚ್ಛವಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಹಂತದಲ್ಲಿದೆ, ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೂ ಅಭಿವೃದ್ಧಿ ನಡೆಯುತ್ತಿರುವ ನಡುವೆಯೂ ಬೀದಿಗಳು ಸ್ವಚ್ಛವಾಗಿವೆ ಎಂಬುದು ಗಮನಾರ್ಹ,” ಎಂದು ಹೇಳಿದ್ದಾರೆ.

ಈ ವಿಡಿಯೋಗೆ ಸದ್ಯದ ತನಕ 3.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಸಿಕ್ಕಿದ್ದು, ನೂರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಆಸ್ಟ್ರೇಲಿಯನ್‌ ಪ್ರವಾಸಿಗನ ನಿಷ್ಪಕ್ಷಪಾತ ದೃಷ್ಟಿಯನ್ನು ಶ್ಲಾಘಿಸಿದ್ದಾರೆ.

ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದು, “ಪಟ್ನಾದ ಜನರು ಅತ್ಯಂತ ಆತಿಥ್ಯಪರರು. ಬಿಹಾರದ ಅಭಿವೃದ್ಧಿಯನ್ನು ಕೆಲವರು ಸಹಿಸಲು ಸಾಧ್ಯವಾಗುತ್ತಿಲ್ಲ,” ಎಂದು. ಮತ್ತೊಬ್ಬ ಕಾಮೆಂಟ್‌ನಲ್ಲಿ, “ಪಟ್ನಾ ಖಂಡಿತವಾಗಿಯೂ ಸುಂದರ ನಗರ. ಉತ್ತಮ ರಸ್ತೆ, ಅದ್ಭುತ ಆಹಾರ. ಇಲ್ಲಿ ಉದ್ಯೋಗ ಮತ್ತು ಐಟಿ ಕ್ಷೇತ್ರ ತೆರೆದುಕೊಂಡರೆ, ಯಾರೂ ಹೊರಗೆ ಹೋಗಬೇಕಾಗಿಲ್ಲ,” ಎಂದು ಬರೆದಿದ್ದಾರೆ.

error: Content is protected !!