ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಕುರಿತು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ. ಈ ಬಗ್ಗೆ ನಿನ್ನೆ ಸಂಜೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇದೇ ಕಾರಣಕ್ಕೆ ಕಲಬುರಗಿಯಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡಿಲ್ಲ. ಆದೇಶವಾದ ಮೇಲೆ ಅವಕಾಶ ಕೊಟ್ಟರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆರ್ಎಸ್ಎಸ್ ಹೊಸದೇನಲ್ಲ, ನೂರು ವರ್ಷವಾಗಿದೆ. ಆರ್ಎಸ್ಎಸ್ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಾಣಿಕೆ ಆಗುವುದಿಲ್ಲ. ಅದರ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಚೋದನೆ ಆಗಬಾರದೆಂದು ಇದು ಮುಂಜಾಗ್ರತಾ ಕ್ರಮ ಎಂದು ತಿಳಿಸಿದರು.