Wednesday, November 5, 2025

ಹುಲಿ ಮರಿಗಳ ಜೊತೆ ‘ಚೆಲ್ಲಾಟ’, ಅರಣ್ಯ ಕಾಯ್ದೆ ಉಲ್ಲಂಘನೆ: ಗೊಂದಲದ ಗೂಡಾದ ಪ್ರಕರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೇಡಗುಳಿ ಅರಣ್ಯದಲ್ಲಿ ನವಜಾತ ಹುಲಿ ಮರಿಗಳೊಂದಿಗೆ ಕೆಲವರು ವಾಹನದ ಬೆಳಕಿನಲ್ಲಿ ಫೋಟೋ ಹಾಗೂ ವೀಡಿಯೋ ಚಿತ್ರೀಕರಣ ಮಾಡಿ ವನ್ಯಜೀವಿ ಕಾಯಿದೆಯನ್ನು ಉಲ್ಲಂಘಿಸಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಸಮಗ್ರ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ತಮ್ಮ ಲಿಖಿತ ಸೂಚನೆಯಲ್ಲಿ ಸಚಿವರು, ಮರಿಗಳನ್ನು ಸ್ಪರ್ಶಿಸಿ ಮತ್ತು ಚಿತ್ರೀಕರಣ ಮಾಡಿ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ದೂರುಗಳು ಬಂದಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ತಾಯಿ ಹುಲಿಯ ಇರುವಿಕೆ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ 2015ರಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಾಗಿದ್ದ ಸಂಸ್ಥೆಯೊಂದಕ್ಕೆ ನಂಟು ಹೊಂದಿರುವವರೂ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.

ಗೊಂದಲದ ಹೇಳಿಕೆ ಮತ್ತು ತಾಯಿ ಹುಲಿಯ ನಿಗೂಢ ಸಾವು ಶಂಕೆ:

ಈ ಘಟನೆ ಕುರಿತು ಅಕ್ಟೋಬರ್ 15 ರಂದು ಬಿಆರ್‌ಟಿ ಅರಣ್ಯ ವಿಭಾಗದ ವತಿಯಿಂದ ನೀಡಲಾದ ಮಾಧ್ಯಮ ಪ್ರಕಟಣೆ ಮತ್ತು ಹುಲಿ ಮರಿಗಳ ಜೊತೆಗಿನ ವಿಡಿಯೋ ವೈರಲ್ ಆದ ನಂತರ ನೀಡಲಾದ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಮತ್ತು ಗೊಂದಲಗಳಿರುವುದು ಕಂಡುಬಂದಿದೆ. ಇದು ತಾಯಿ ಹುಲಿ ಹತ್ಯೆಯಾಗಿರುವ ಬಲವಾದ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎನ್‌ಜಿಒಗಳಿಗೆ ಬರುವ ಹಣ ದುರುಪಯೋಗವಾಗಿರುವ ಆರೋಪವೂ ಕೇಳಿಬಂದಿದೆ.

ಇದೇ ಕಾರಣದಿಂದ, ಪ್ರಕರಣದ ಗಂಭೀರತೆ ಮತ್ತು ಸಂಕೀರ್ಣತೆಯನ್ನು ಮನಗಂಡ ಸಚಿವರು, ಎಲ್ಲಾ ಆಯಾಮಗಳಿಂದ ಕೂಲಂಕಷವಾಗಿ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವಹಿಸುವುದು ಸೂಕ್ತ ಎಂದು ಪರಿಗಣಿಸಿದ್ದಾರೆ.

error: Content is protected !!