Tuesday, December 16, 2025

ಯೂಟ್ಯೂಬ್ ವೈರಲ್ ಸ್ಟಾರ್‌ಗೆ ಪೋಕ್ಸೋ ಕಂಟಕ: ಏಳು ಮಂದಿ ವಿರುದ್ಧ ಅತ್ಯಾಚಾರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಜನಪ್ರಿಯ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದಿರುವುದು 2025ರ ಅಕ್ಟೋಬರ್ 24ರಂದು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವಿವರ:

ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದರು. ಇದೇ ಕಾರ್ಯಕ್ರಮಕ್ಕೆ ಅಪ್ರಾಪ್ತ ಬಾಲಕಿಯು ಡ್ಯಾನ್ಸ್ ಮಾಡಲು ಬಂದಿದ್ದಳು.

ಕಾರ್ಯಕ್ರಮದ ನಂತರ, ಬಾಲಕಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಆರೋಪಿಗಳು ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಆಕೆ ಮಾಡಿದ್ದಾರೆ. ಬಾಲಕಿಯ ದೂರಿನಲ್ಲಿ ಮ್ಯೂಸಿಕ್ ಮೈಲಾರಿ ಸೇರಿದಂತೆ ಒಟ್ಟು ಏಳು ಜನರು ಈ ಅಪರಾಧ ಎಸಗಿದ್ದಾರೆ ಎಂದು ಹೆಸರಿಸಲಾಗಿದೆ.

ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಅದನ್ನು ಡಿಸೆಂಬರ್ 15ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ, ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಹಾಗೂ ಇತರ ಆರು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

ಮ್ಯೂಸಿಕ್ ಮೈಲಾರಿ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದರು. ಅದರಲ್ಲೂ ವಿಶೇಷವಾಗಿ ಅವರ ‘ಬಾಗಲಕೋಟೆ ಬಸ್ ಸ್ಟ್ಯಾಂಡ್​​​ನಾಗ’ ಎಂಬ ಹಾಡು ಅಪಾರ ಜನಪ್ರಿಯತೆ ಗಳಿಸಿ ಟ್ರೆಂಡಿಂಗ್‌ನಲ್ಲಿತ್ತು. ಈ ಘಟನೆಯಿಂದಾಗಿ ಜನಪ್ರಿಯ ಗಾಯಕರ ವಿರುದ್ಧ ಕಾನೂನು ಕ್ರಮ ಜರುಗಿದ್ದು, ಇದು ಜಾನಪದ ಲೋಕಕ್ಕೆ ಶಾಕ್ ನೀಡಿದೆ.

error: Content is protected !!