ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ಮರಾಠಿ ನಟಿ ಪ್ರಿಯಾ ಮರಾಠೆ(38) ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಕಳೆದ ವರ್ಷ ಪ್ರಿಯಾ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರು, ಸ್ನೇಹಿತರು ಮತ್ತು ಅಪಾರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಪ್ರಿಯಾ 1987 ಏಪ್ರಿಲ್ 23 ರಂದು ಮುಂಬೈನಲ್ಲಿ ಜನಿಸಿದರು. ಅಲ್ಲೇ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಮನರಂಜನಾ ಕ್ಷೇತ್ರಕ್ಕೆ ಧುಮುಕಲು ನಿರ್ಧರಿಸಿದರು. ಅವರು ನಟನೆಯತ್ತ ಗಮನ ಹರಿಸಲು ಪ್ರಾರಂಭಿಸುವ ಮೊದಲು ಸ್ಟ್ಯಾಂಡ್-ಅಪ್ ಹಾಸ್ಯನಟಿಯಾಗಿ ಮನರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಿಯಾ ಮರಾಠೆ ಅವರು 2012 ಏಪ್ರಿಲ್ 24 ರಂದು ನಟ ಶಾಂತನು ಮೋಘೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪ್ರಿಯಾ ಮರಾಠೆ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಅವರು ಖಳನಾಯಕಿ ಪಾತ್ರ ನಿರ್ವಹಿಸಿದ್ದರೂ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಪ್ರಿಯಾ ಕೊನೆಯದಾಗಿ ‘ತುಜೆ ಗೀತ್ ಗಾತ್ ಆಹೆ’, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಅನಾರೋಗ್ಯದ ಕಾರಣ ನೀಡಿ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟಿದ್ದರು. ಅವರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿ ಅನಾರೋಗ್ಯ ಕಾರಣದಿಂದ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

ಪ್ರಿಯಾ ಅವರು ‘ಯಾ ಸುಖ್ನೋ ಯಾ’, ಚಾರ್ ದಿಸಾನ್ ಸಾಸುಚೆ, ತು ತಿಥನ್ ಮಿ, ಸಂಭಾಜಿ, ಯೇಯು ಕಾಶಿ ಮಿ ನಂದಯ್ಲಾ, ತುಜೆ ಗೀತ್ ಗಾತ್ ಆಹೆ, ಸ್ವರಾಜ್ಯ ರಕ್ಷಕ ಸಂಭಾಜಿ ಮಹಾರಾಜರ ಜೀವನ ಆಧಾರಿತ ಧಾರಾವಾಹಿಯಲ್ಲಿ ಗೋದಾವರಿ ಪೋಷಕ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಜೀಜಾಮಾತಾ ಧಾರಾವಾಹಿಯಲ್ಲೂ ಅವರು ಬಣ್ಣ ಹಚ್ಚಿದ್ದರು.