Wednesday, December 24, 2025

ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಗರ್ಭಿಣಿ ಮೇಲೆ ಹಲ್ಲೆ; ಆರೋಪಿ ಈಗ ಕಂಬಿ ಹಿಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಡೆದ ಅಮಾನವೀಯ ಘಟನೆಯೊಂದು ನಡೆದಿದೆ. “ನಾನು ಗರ್ಭಿಣಿ, ದಯವಿಟ್ಟು ಇಲ್ಲಿ ಪಟಾಕಿ ಸಿಡಿಸಬೇಡಿ” ಎಂದು ಮನವಿ ಮಾಡಿದ ಮಹಿಳೆಯ ಮೇಲೆ ವೈಎಸ್‌ಆರ್‌ಸಿಪಿ ಕಾರ್ಯಕರ್ತ ಅಜಯ್ ದೇವ್ ಎಂಬಾತ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.

ಡಿಸೆಂಬರ್ 21 ರಂದು ಕದಿರಿ ಪಟ್ಟಣದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ಸಂಧ್ಯಾರಾಣಿ ಎಂಬ ಗರ್ಭಿಣಿ ಮಹಿಳೆ, ಜನಸಂದಣಿ ಹೆಚ್ಚಿರುವ ಕಾರಣ ಸ್ವಲ್ಪ ದೂರದಲ್ಲಿ ಪಟಾಕಿ ಹಚ್ಚುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದ್ದರು. ಇದರಿಂದ ಕೆರಳಿದ ಆರೋಪಿ ಅಜಯ್ ದೇವ್ ಮತ್ತು ಆತನ ಸಹಚರ ಅಂಜಿನಪ್ಪ, ಮಹಿಳೆಯ ಮೇಲೆ ಮುಗಿಬಿದ್ದಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಗಳು ಸಂಧ್ಯಾರಾಣಿಯ ಕತ್ತು ಹಿಸುಕಿದ್ದಲ್ಲದೆ, ಆಕೆಯ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುವ ದುರುದ್ದೇಶದಿಂದ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದಿದ್ದಾರೆ.

ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು, ಪ್ರಮುಖ ಆರೋಪಿ ಅಜಯ್ ದೇವನನ್ನು ಬಂಧಿಸಿದ್ದಾರೆ. ಜನರಿಗೆ ಪಾಠ ಕಲಿಸಲು ಮತ್ತು ಕಾನೂನಿನ ಭಯ ಹುಟ್ಟಿಸಲು, ಪೊಲೀಸರು ಆರೋಪಿಯನ್ನು ಕದಿರಿ ಆರ್‌ಟಿಸಿ ಬಸ್ ನಿಲ್ದಾಣದಿಂದ ಗ್ರಾಮೀಣ ಪೊಲೀಸ್ ಠಾಣೆಯವರೆಗೆ ಬರಿಗಾಲಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಮೆರವಣಿಗೆ ಮಾಡಿಸಿದ್ದಾರೆ.

ಪ್ರಸ್ತುತ ಅಜಯ್ ದೇವ್ ನ್ಯಾಯಾಂಗ ಬಂಧನದಲ್ಲಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅಂಜಿನಪ್ಪನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. “ಮಹಿಳೆಯರ ಮೇಲಿನ ಇಂತಹ ದೌರ್ಜನ್ಯಗಳನ್ನು ಸಹಿಸುವುದಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆ ಖಚಿತ” ಎಂದು ಡಿಎಸ್‌ಪಿ ಶಿವ ನಾರಾಯಣಸ್ವಾಮಿ ತಿಳಿಸಿದ್ದಾರೆ.

error: Content is protected !!