Tuesday, September 16, 2025

ಅಪಘಾತಕ್ಕೆ ಬಲಿಯಾದ ಮಗನ ಅಂಗಾಂಗ ದಾನ ಮಾಡಿದ ಅರ್ಚಕ ಕುಟುಂಬ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು : ಮೆದುಳು ನಿಷ್ಕ್ರೀಯಕ್ಕೆ ಒಳಗಾದ ಮಗನ ದೇಹದ ಅಂಗಾಂಗಗಳನ್ನು ದಾನ ಮಾಡಿ ನೋವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಓರ್ವ ವ್ಯಕ್ತಿಯ ಅಂಗಾಂಗಗಳು ಹಲವರಿಗೆ ಜೀವದಾನ ಮಾಡಿದೆ.

ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಆರ್‍ ಒ ಗುರುಸಿದ್ದಲಿಂಗಾರಾಧ್ಯ ಅವರು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸ್ಕೂಟರ್‍ ಅಪಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿತ್ತು. ವ್ಯಕ್ತಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು ಅವರನ್ನು ವೆಂಟಿಲೇಟರ್‍‌ ಬೆಂಬಲದಲ್ಲಿ ಇರಿಸಲಾಗಿತ್ತು. ಸ್ಕ್ಯಾನಿಂಗ್‌ನಲ್ಲಿ ತೀವ್ರ ಮಟ್ಟದಲ್ಲಿ ಮೆದುಳು ಹಾನಿಗೊಳಗಾಗಿದ್ದು ಪತ್ತೆಯಾಗಿತ್ತು. ವೈದ್ಯರ ನಿರಂತರ ಚಿಕಿತ್ಸೆ ನಡುವೆಯೂ ವ್ಯಕ್ತಿಯ ಆರೋಗ್ಯ ಕ್ಷೀಣಿಸಿದ್ದು ವೈದ್ಯರು ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಘೋಷಿಸಿದರು.

ಈ ವಿಚಾರದಿಂದ ಕಂಗೆಟ್ಟಿದ್ದ ವ್ಯಕ್ತಿಯ ತಾಯಿ ವನಜಾಕ್ಷಮ್ಮ, ತಂದೆ ಓಂಕಾರಾಧ್ಯಾ, ಪತ್ನಿ ಆಶಾ , ಮೂರು ವರ್ಷದ ಮಗಳು ಮತ್ತು ಸಹೋದರಿಯರಾದ ಛಾಯಾ ಮತ್ತು ಇಂದುಮತಿ ತಮ್ಮ ದುಃಖದ ನಡುವೆಯೂ ಮೊದಲು ಕಣ್ಣು ದಾನ ಮಾಡಲು ನಿರ್ಧರಿಸಿದ್ದರು.

ಈ ಕುರಿತು ಮಾತನಾಡಿದ ಪತ್ನಿ ಆಶಾ , “ ಮೊದಲು ಕಣ್ಣು ದಾನಕ್ಕೆ ನಿರ್ಧರಿಸಿದ್ದೇವು , ಮಣಿಪಾಲ ಆಸ್ಪತ್ರೆ ನಡೆಸಿದ ಕೌನ್ಸಿಲಿಂಗ್‌ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಕುರಿತು ಇರುವ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿಯಿತು . ಬಳಿಕ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ವಿವಿಧ ಅಂಗಾಂಗಗಳನ್ನು ದಾನ ಮಾಡಿ ಅಗತ್ಯವಿರುವವರಿಗೆ ನೆರವಾಗಲು ನಿರ್ಧರಿಸಿದೆವು” ಎಂದರು.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ ಆಸ್ಪತ್ರೆಯ ಕ್ರಿಟಿಕಲ್‌ ಕೇರ್ ಮೆಡಿಸಿನ್‌ನ ಚೇರ್ಮನ್‌, ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್‌ ಡಾ. ಸುನೀಲ್‌ ಕಾರಂತ್ ಹಾಗೂ ಕ್ರಿಟಿಕಲ್‌ ಕೇರ್ ಮೆಡಿಸಿನ್‌ನ ಕನ್ಸಲ್ಟೆಂಟ್ ಡಾ. ಮಹೇಶ್‌ ಪಾಡ್ಯಾನಾ ಅವರ ತಂಡ ವ್ಯಕ್ತಿಯ ಕಾರ್ನಿಯಾಗಳು, ಯಕೃತ್ತು ಮತ್ತು ಹೃದಯ ಕವಾಟಗಳಗಳನ್ನು ಸುರಕ್ಷಿತವಾಗಿ ಅಂಗಾಗ ಕಸಿಗೆ ಸಂರಕ್ಷಿಸಿದ್ದಾರೆ.

ಇದನ್ನೂ ಓದಿ