Saturday, September 20, 2025

ʼಆ ಡಾಬಾ ಬಳಿ ಕಾರ್‌ ನಿಲ್ಲಿಸಿದ ಮೇಲೆ ಪ್ರಧಾನಿ ಮೋದಿ ಊಟ ಮಾಡಲಿಲ್ಲʼ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಪ್ರಧಾನಿ ಮೋದಿ ಜನ್ಮದಿಂದ. ಈ ದಿನದಂದು ಗೃಹ ಸಚಿವ ಅಮಿತ್‌ ಶಾ ಪ್ರಧಾನಿ ಮೋದಿಯಿಂದ ಕಲಿತ ಪಾಠವೊಂದನ್ನು ಜಗತ್ತಿಗೆ ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಒಂದು ಸಂಜೆ ತಡವಾಗಿ ಅಹಮದಾಬಾದ್‌ನಿಂದ ರಾಜ್‌ಕೋಟ್‌ಗೆ ಪ್ರಧಾನಿ ಮೋದಿಯವರೊಂದಿಗೆ ಪ್ರಯಾಣಿಸಿದ್ದನ್ನು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ. “ಅದಾಗಲೇ ರಾತ್ರಿ 8.30 ಆಗಿತ್ತು. ಮೋದಿ ಅವರು ಸಾಮಾನ್ಯವಾಗಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಭೋಜನ ಸೇವಿಸುತ್ತಿದ್ದರು. ಆದರೆ, ಆ ಪ್ರಯಾಣದ ಸಮಯದಲ್ಲಿ ಪ್ರಧಾನಿ ಮೋದಿ ಸೂರ್ಯನಗರದಲ್ಲಿ ಕಾರು ನಿಲ್ಲಿಸಲು ಸೂಚಿಸಿದರು. ಅಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ರಸ್ತೆಬದಿಯ ಡಾಬಾ ನಡೆಸುತ್ತಿದ್ದರು. ನಾವು ಅವರ ಡಾಬಾ ಬಳಿ ಕಾರನ್ನು ನಿಲ್ಲಿಸಿದೆವು. ನಾವೆಲ್ಲರೂ ತಿನ್ನಲು ಕುಳಿತೆವು. ಮೋದಿಯವರಿಗೆ ಹಸಿವಾಗಿ ಇಲ್ಲಿ ನಿಲ್ಲಿಸಿರಬಹುದು, ಅವರ ನೆಪದಲ್ಲಿ ನಾವೂ ಏನಾದರೂ ತಿನ್ನಬಹುದು ಎಂದು ನಾನು ಭಾವಿಸಿದ್ದೆ. ಆದರೆ, ನಾವೆಲ್ಲರೂ ಊಟ ಮಾಡುತ್ತಿದ್ದಾಗ ಪ್ರಧಾನಿ ಮೋದಿ ಒಂದೆರಡು ತುಂಡು ಹಣ್ಣುಗಳನ್ನು ಮಾತ್ರ ತಿಂದರು” ಎಂದು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.

ಆ ರಾತ್ರಿ ನಾನು ಯೋಚನೆ ಮಾಡಿದೆ. ಆ ಡಾಬಾದಲ್ಲಿ ಮೋದಿಯೇನೂ ತಿನ್ನಲೇ ಇಲ್ಲ. ಹಾಗಾದರೆ, ಅಲ್ಲಿ ಕಾರು ನಿಲ್ಲಿಸಲು ಹೇಳಿದ್ದು ಏಕೆ? ಎಂದು ಯೋಚಿಸಿದೆ. ಆಗ ನನಗೆ ನೆನಪಾಯಿತು, ಅಲ್ಲಿ ಮೋದಿ ಕಾರು ನಿಲ್ಲಿಸಲು ಹೇಳಿದ್ದು ತಮಗಾಗಿ ಅಲ್ಲ, ಹಸಿದಿರುವ ಕಾರ್ಯಕರ್ತರಿಗಾಗಿ ಎಂದು. ಪ್ರಧಾನಿಯವರು ಯಾವಾಗಲೂ ತಮ್ಮ ದೇಶ, ಪಕ್ಷ, ಕಾರ್ಯಕರ್ತರ ಬಗ್ಗೆ ಚಿಂತಿಸುತ್ತಾರೆ. ನಾನು ಮೋದಿಯವರಿಂದ ನಂಬಿಕೆ, ಸಮರ್ಪಣೆಯೇ ಸಂಘಟನೆಯ ಆತ್ಮ ಎಂಬುದರ ಪಾಠವನ್ನು ಕಲಿತೆ” ಎಂದು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ