ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ೫೪೦ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಎಸ್. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ೨೦ ಲಕ್ಷ ರೂಪಾಯಿ ಹಾಗೂ ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ ೨ ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆ ಮಂಜೂರು ಮಾಡಲು ಸೂಚಿಸಲಾಗಿದ್ದು, ೨-೩ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಆನೆಪಥ ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಐಐಎಸ್‌ಸಿಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್. ಸುಕುಮಾರ್ ಅವರ ತಂಡ ಅಧ್ಯಯನ ಆರಂಭಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಗಳ ಹಾವಳಿಯಿಂದ ಬೆಳೆ ಹಾನಿ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮಂಗಳನ್ನು ಹಿಡಿಯಲು ಸೂಚನೆ ನೀಡುವುದಾಗಿ ಸದನಕ್ಕೆ ತಿಳಿಸಿದ್ದಾರೆ.