ಪ್ರೊ.ಎಸ್.ಎನ್ ಶ್ರೀಧರ್‌, ಡಾ. ತಮಿಳ್‌ ಸೆಲ್ವಿಗೆ ‘ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್’ ಪುರಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ನಿಘಂಟು ಬ್ರಹ್ಮ’ ದಿವಂಗತ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ‘ಕಥೆಕೂಟʼ ಸಂಸ್ಥೆಯಿಂದ ನೀಡಲಾಗುವ ‘ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್’ ಪುರಸ್ಕಾರದ 2024 ಮತ್ತು 2025ರ ಪುರಸ್ಕೃತರನ್ನು ಘೋಷಿಸಲಾಗಿದೆ. ಈ ಪುರಸ್ಕಾರವು ₹10,000 ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಪ್ರೊಫೆಸರ್ ಎಸ್.ಎನ್. ಶ್ರೀಧರ್‌ಗೆ 2024ನೇ ಸಾಲಿನ ಪುರಸ್ಕಾರ: ಕುಮಾರವ್ಯಾಸ ಭಾರತವನ್ನು ಇಂಗ್ಲಿಷಿಗೆ ಅನುವಾದಿಸುವ ತಂಡದ ಮುಖ್ಯಸ್ಥರಾಗಿರುವ ‘ಹಿರಿಯ ಭಾಷಾವಿಜ್ಞಾನಿ ಪ್ರೊಫೆಸರ್ ಎಸ್.ಎನ್. ಶ್ರೀಧರ್’ ಅವರಿಗೆ 2024ನೇ ಸಾಲಿನ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ಭಾರತೀಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಧರ್ ಅವರು, ಕುಮಾರವ್ಯಾಸ ಭಾರತದ ಇಂಗ್ಲಿಷ್ ಅನುವಾದ (The Kannada Mahabharata) ಯೋಜನೆಗೆ ಚಾಲನೆ ನೀಡಿದ್ದಾರೆ. ‘ಮಾಡರ್ನ್ ಕನ್ನಡ ಗ್ರಾಮರ್’, ‘ಇಂದಿನ ಕನ್ನಡ: ರಚನೆ ಮತ್ತು ಬಳಕೆ’ ಸೇರಿದಂತೆ 70ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ಮೂಲಕ ಕನ್ನಡ ಭಾಷಾವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಡಾ. ತಮಿಳ್‌ ಸೆಲ್ವಿಗೆ 2025ನೇ ಸಾಲಿನ ಪುರಸ್ಕಾರ : ಅನುವಾದಕಿ ಮತ್ತು ಭಾಷಾ ಸಂಶೋಧಕಿ ಡಾ. ತಮಿಳ್ ಸೆಲ್ವಿ ಅವರಿಗೆ 2025ನೇ ಸಾಲಿನ ಪುರಸ್ಕಾರ ಲಭಿಸಿದೆ. ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾಗಿರುವ ಇವರು, ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಕಾರ್ಯದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ‘ನಾನು ಅವನಲ್ಲ, ಅವಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದ ‘ಶ್ರೇಷ್ಠ ಅನುವಾದಕಿ ಪ್ರಶಸ್ತಿ’ಯೂ ಅವರಿಗೆ ಸಂದಿವೆ. ‘ನೇಪಥ್ಯ’, ‘ಅಶೋಕ ಮಿತ್ರನ್ ಕಥೆಗಳು’ ಸೇರಿದಂತೆ ಹಲವು ಪ್ರಸಿದ್ಧ ಅನುವಾದ ಕೃತಿಗಳನ್ನು ರಚಿಸಿದ್ದಾರೆ.

ಪುರಸ್ಕಾರ ವಿಜೇತರ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಮತ್ತು ಜಿ.ವಿ. ಅರುಣ್ ಅವರು ಇದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು 2025ರ ನವೆಂಬರ್ 1ರಂದು ನಡೆಯಲಿದೆ ಎಂದು ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!