ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ವಿವಿಧ ನದಿಗಳ ಪ್ರವಾಹದಿಂದಾಗಿ ಅನೇಕ ಗ್ರಾಮಗಳು ಮುಳುಗಿಹೋಗಿವೆ. ಹೀಗಾಗಿ ಪ್ರವಾಹದಿಂದ ತತ್ತರಿಸುವ ಪಂಜಾಬ್ ನಾಗರೀಕರ ನೆರವಿಗಾಗಿ ಮನವಿ ಮಾಡಲಾಗುತ್ತಿದೆ. ಅದರಂತೆ ಈಗ ಐಪಿಎಲ್ (IPL) ತಂಡ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪಂಜಾಬ್ ರಾಜ್ಯಕ್ಕೆ ಸಹಾಯ ಹಸ್ತ ಚಾಚಿದೆ.
ಪಂಜಾಬ್ ಕಿಂಗ್ಸ್ ಗುರುವಾರ ಹೇಳಿಕೆ ನೀಡಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಸುಮಾರು 34 ಲಕ್ಷ ರೂ.ಗಳ ಸಹಾಯವನ್ನು ಘೋಷಿಸಿದೆ. ಇದರೊಂದಿಗೆ, ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸುವ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ.
ಪಂಜಾಬ್ ಕಿಂಗ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿ, ‘ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಪ್ರಸಿದ್ಧ ಹೇಮಕುಂಡ್ ಫೌಂಡೇಶನ್ ಮತ್ತು ಆರ್‌ಟಿಐ ಜೊತೆ ಕೈಜೋಡಿಸುತ್ತಿದ್ದೇವೆ. ಸಾಧ್ಯವಾದಷ್ಟು ಪರಿಹಾರ ಕಾರ್ಯಗಳನ್ನು ವಿಸ್ತರಿಸಲು, ಈ ಎರಡೂ ಸಂಸ್ಥೆಗಳ ಸಹಯೋಗದೊಂದಿಗೆ ‘ಟುಗೆದರ್ ಫಾರ್ ಪಂಜಾಬ್’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ, ಪಂಜಾಬ್ ಕಿಂಗ್ಸ್ ಸ್ವತಃ ಈ ಸಂಸ್ಥೆಗಳಿಗೆ 33.8 ಲಕ್ಷ ರೂ.ಗಳನ್ನು ದೇಣಿಗೆ ನೀಡುತ್ತಿದೆ ಎಂದು ತಿಳಿಸಿದೆ.
ಪಂಜಾಬ್‌ನ ಅನೇಕ ಹಳ್ಳಿಗಳು ಮತ್ತು ನಗರಗಳಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಂತ್ರಸ್ತರು ತಮ್ಮ ಜಾನುವಾರುಗಳನ್ನು ಮತ್ತು ಕುಟುಂಬಗಳನ್ನು ಪ್ರವಾಹದಿಂದ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಾವಿರಾರು ಎಕರೆ ಕೃಷಿಭೂಮಿ ಕೂಡ ಪ್ರವಾಹದಿಂದ ಸರ್ವನಾಶವಾಗಿದೆ. ಅಂತಹ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ನಿಧಿಯ ಮೂಲಕ ರಕ್ಷಣಾ ದೋಣಿಗಳನ್ನು ಖರೀದಿಸಲಾಗುವುದು ಎಂದು ಫ್ರಾಂಚೈಸ್ ಹೇಳಿದೆ.
ದಲ್ಲದೆ, ಪಂಜಾಬ್ ಕಿಂಗ್ಸ್ ಆನ್‌ಲೈನ್ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಸಹ ಪ್ರಾರಂಭಿಸಿದೆ, ಇದರ ಮೂಲಕ ಫ್ರಾಂಚೈಸಿ ಸೆಪ್ಟೆಂಬರ್ 15 ರೊಳಗೆ 2 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ನಿಧಿಯನ್ನು ‘ಗ್ಲೋಬಲ್ ಸಿಖ್ ಚಾರಿಟಿ’ಗೆ ನೀಡಲಾಗುವುದು ಎಂದು ಫ್ರಾಂಚೈಸಿ ತಿಳಿಸಿದೆ. ಅಲ್ಲದೆ ಈ ವಿಪತ್ತಿನ ಪರಿಸ್ಥಿತಿಯಲ್ಲಿ ರಾಜ್ಯದ ಜನರಿಗೆ ಗರಿಷ್ಠ ಸಹಾಯವನ್ನು ಒದಗಿಸಲು ಪಂಜಾಬ್ ಕಿಂಗ್ಸ್ ತನ್ನ ಅಭಿಮಾನಿಗಳು ಮತ್ತು ಸಾಮಾನ್ಯ ಜನರು ಈ ಆನ್‌ಲೈನ್ ನಿಧಿಯಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡಿದೆ