ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಚಿನ್ನದ ಯುಗಕ್ಕೆ ಸಾಕ್ಷಿಯಾದ ಆರ್‌ಕೆ ಸ್ಟುಡಿಯೋ ಮತ್ತೆ ಸುದ್ದಿ ಶಿರೋನಾಮೆಯಾಗುತ್ತಿದೆ. 1948ರಲ್ಲಿ ರಾಜ್ ಕಪೂರ್ ನಿರ್ಮಿಸಿದ ಈ ಐತಿಹಾಸಿಕ ಸ್ಟುಡಿಯೋ ಹಲವಾರು ದಂತಕಥೆ ಸಿನಿಮಾಗಳ ಚಿತ್ರೀಕರಣ ಸ್ಥಳವಾಗಿತ್ತು. ಮುಂಬೈನ ಚೆಂಬೂರ್‌ನಲ್ಲಿರುವ ಆರ್‌ಕೆ ಸ್ಟುಡಿಯೋ ಕೇವಲ ಒಂದು ಶೂಟಿಂಗ್ ಸೆಟ್ ಮಾತ್ರವಲ್ಲ, ಭಾರತೀಯ ಚಲನಚಿತ್ರ ಇತಿಹಾಸದ ಅವಿಭಾಜ್ಯ ಅಂಗವಾಗಿತ್ತು. ಇದೇ ಸ್ಟುಡಿಯೋದಲ್ಲಿ ರಾಜ್ ಕಪೂರ್ ಅವರು ‘ಆರ್‌ಕೆ ಫಿಲಮ್ಸ್’ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು.
ಆದರೆ 2017ರಲ್ಲಿ ಸ್ಟುಡಿಯೋಗೆ ಬೆಂಕಿ ಬಿದ್ದು ಭಾರೀ ನಷ್ಟ ಉಂಟಾಯಿತು. ಆ ಘಟನೆಯಲ್ಲಿ ರಾಜ್ ಕಪೂರ್ ಹಾಗೂ ಇತರ ದಿಗ್ಗಜರಿಗೆ ಸೇರಿದ ಅನೇಕ ಅಮೂಲ್ಯ ವಸ್ತುಗಳು, ಸೆಟ್‌ಗಳು ಮತ್ತು ಚಿತ್ರೋಪಕರಣಗಳು ಸಂಪೂರ್ಣ ನಾಶವಾಗಿದ್ದವು. ಬಳಿಕ, 2019ರಲ್ಲಿ ಕಪೂರ್ ಕುಟುಂಬವು ಆರ್‌ಕೆ ಸ್ಟುಡಿಯೋವನ್ನು ಗೋದ್ರೆಜ್ ಗ್ರೂಪ್‌ಗೆ ಮಾರಾಟ ಮಾಡಿತು. ಈಗ ಆ ಪ್ರದೇಶದಲ್ಲಿ ಗೋದ್ರೆಜ್ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ನಡೆಯುತ್ತಿದೆ.
ಈ ನಡುವೆ ರಾಜ್ ಕಪೂರ್ ಅವರ ಮೊಮ್ಮಗ ರಣ್‌ಬೀರ್ ಕಪೂರ್ ಆರ್‌ಕೆ ಫಿಲಮ್ಸ್‌ಗೆ ಹೊಸ ಜೀವ ತುಂಬುವ ಸನ್ನಾಹದಲ್ಲಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ತಮ್ಮದೇ ನಿರ್ದೇಶನದ ಸಿನಿಮಾದ ಮೂಲಕ ರೀ ಲಾಂಚ್ ಗೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ತಾತನ ಪರಂಪರೆಯನ್ನು ಮುಂದುವರಿಸುವ ನಿರ್ಧಾರವನ್ನು ರಣ್‌ಬೀರ್ ದೃಢಪಡಿಸಿದ್ದಾರೆ.

