ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಿನಿ ಲೋಕದಲ್ಲಿ ಈಗ ಚರ್ಚೆಯ ಕೇಂದ್ರಬಿಂದುವಾಗಿರುವ ಸಿನಿಮಾ ಎಂದರೆ ರಾಜಮೌಳಿ ನಿರ್ದೇಶನ ಮತ್ತು ಮಹೇಶ್ ಬಾಬು ಅಭಿನಯದ ಹೊಸ ಪ್ರಾಜೆಕ್ಟ್. ಈಗಾಗಲೇ ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಮೂಲಕ ಭಾರತೀಯ ಸಿನಿಮಾಗಳನ್ನು ಜಾಗತಿಕ ವೇದಿಕೆಗೆ ಕರೆದುಕೊಂಡು ಹೋದ ರಾಜಮೌಳಿ, ಈ ಬಾರಿ ಇನ್ನಷ್ಟು ದೊಡ್ಡ ಕನಸನ್ನು ಕಾಣುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಿಂದ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಸಿನಿಮಾ ತಲುಪಿಸುವ ಉದ್ದೇಶದಿಂದ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಸಿನಿಮಾ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಹೊಂದಿದ ಪ್ರಾಜೆಕ್ಟ್ ಎಂದು ಹೇಳಲಾಗುತ್ತಿದೆ. ಹೈದರಾಬಾದ್, ರಾಜಸ್ಥಾನಗಳ ಬಳಿಕ ಈಗ ಕೀನ್ಯಾದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನೈಸರ್ಗಿಕ ವನ್ಯಜೀವಿಗಳ ನಡುವೆ ಶೂಟಿಂಗ್ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜಮೌಳಿ ಕೀನ್ಯಾ ಅಧ್ಯಕ್ಷರನ್ನೂ ಭೇಟಿ ಮಾಡಿದ್ದಾರೆ.
ಸಾಮಾನ್ಯವಾಗಿ ಭಾರತೀಯ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತವೆ. ಆದರೆ ಈ ಸಿನಿಮಾ ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ವಿಶ್ವದ 120ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇದು ಭಾರತೀಯ ಸಿನಿಮಾಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ವಿಸ್ತರಣೆ ಆಗಲಿದೆ.
ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕೆಲವು ಹಾಲಿವುಡ್ ನಟರು ಮತ್ತು ವಿಶ್ವ ಮಟ್ಟದ ತಂತ್ರಜ್ಞರೂ ಈ ಪ್ರಾಜೆಕ್ಟ್‌ಗೆ ಕೈ ಜೋಡಿಸಿದ್ದಾರೆ.
ಸಿನಿಮಾ ಶೈಲಿ ‘ಇಂಡಿಯಾನಾ ಜೋನ್ಸ್’ ಮತ್ತು ‘ಮಿಷನ್ ಇಂಪಾಸಿಬಲ್’ ಮಾದರಿಯ ಅಡ್ವೆಂಚರ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ನಾಯಕನು ಒಂದು ಮಿಷನ್‌ನಲ್ಲಿ ಜಗತ್ತಿನ ಹಲವು ದೇಶಗಳಿಗೆ ಪ್ರಯಾಣಿಸುತ್ತಾನೆ. ಅಲ್ಲಿ ಎದುರಾಗುವ ಸಂಕಷ್ಟಗಳನ್ನು ಬುದ್ಧಿ ಹಾಗೂ ಬಲದಿಂದ ಎದುರಿಸುವ ಕಥೆ ಪ್ರೇಕ್ಷಕರಿಗೆ ತೀವ್ರ ರೋಮಾಂಚನ ನೀಡಲಿದೆ.