ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್.ಎಸ್. ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ‘ಬಾಹುಬಲಿ’ ಸಿನಿಮಾದಲ್ಲಿ ಖಳನಾಯಕ ಬಲ್ಲಾಳದೇವನಾಗಿ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ನಟ ರಾಣಾ ದಗ್ಗುಬಾಟಿ ಇದೀಗ ಹೊಸ ಪ್ರಯೋಗಗಳತ್ತ ಗಮನ ಹರಿಸಿದ್ದಾರೆ. ಈ ಪ್ರಯೋಗ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹಾದಿ ಸೃಷ್ಟಿಸುವ ಗುರಿ ಹೊಂದಿದೆ.
ನಟನೆಗೆ ಸೀಮಿತವಾಗದೆ ರಾಣಾ ದಗ್ಗುಬಾಟಿ ಅವರು ಇದೀಗ ನಿರ್ಮಾಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ದಕ್ಷಿಣದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿರುವ ಅವರು, ಇದೀಗ ಬಾಲಿವುಡ್‌ನಲ್ಲೂ ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದ್ದಾರೆ.
ರಾಣಾ ಅವರು ‘ಸ್ಪಿರಿಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ವಿಎಫ್‌ಎಕ್ಸ್ ಸ್ಟುಡಿಯೋ ಒಂದನ್ನು ಆರಂಭಿಸುವ ಮೂಲಕ ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ದುಲ್ಕರ್ ಸಲ್ಮಾನ್ ನಟನೆಯ ‘ಕಾಂತಾ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ರಾಣಾ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಬಾಲಿವುಡ್‌ನಲ್ಲಿ ವಿಭಿನ್ನ ಕಥಾವಸ್ತು ಆಧರಿಸಿದ ಚಿತ್ರವೊಂದನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ನಟನೆ, ನಿರ್ಮಾಣ ಹಾಗೂ ಉದ್ಯಮಗಳಲ್ಲಿ ಏಕಕಾಲಕ್ಕೆ ತೊಡಗಿಸಿಕೊಂಡಿರುವ ರಾಣಾ ದಗ್ಗುಬಾಟಿ, ಹೊಸ ರೀತಿಯ ಹಾಗೂ ಉತ್ತಮ ಕಂಟೆಂಟ್‌ಗಾಗಿ ಎದುರು ನೋಡುತ್ತಿರುವ ಸಿನಿಮಾ ಅಭಿಮಾನಿಗಳಿಗೆ ಹೊಸ ಹೊಸ ವಿಷಯಗಳನ್ನು ತಲುಪಿಸಲು ನಿರ್ಮಾಪಕರಾಗಿ ಮುಂಚೂಣಿಗೆ ಬರುತ್ತಿದ್ದಾರೆ. ಅವರು ಸದ್ಯದಲ್ಲಿಯೇ ತಮ್ಮ ಈ ಮಹತ್ವಾಕಾಂಕ್ಷೆಯ ಸಿನಿಮಾ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

