Sunday, January 11, 2026

ರಾಯರ ಮಠ – ಉತ್ತರಾದಿಮಠದ ತೀರ್ಥರ ಸಮಾಗಮ: ಹಳೆಯ ವ್ಯಾಜ್ಯಗಳ ಇತ್ಯರ್ಥ

ಹೊಸದಿಗಂತ ವರದಿ ಬೀದರ್:

ಬೆಂಗಳೂರಿನ ಬಸವನಗುಡಿಯಲ್ಲಿ ಉತ್ತರಾದಿ ಮಠದಲ್ಲಿ ರವಿವಾರ ಮಧ್ಯಾಹ್ನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರ ಸಮಾಗಮ ಉಭಯ ಮಠಗಳಲ್ಲಿನ ಹಳೆಯ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲಾಯಿತು.

ಕಳೆದ ಐದು ದಶಕಗಳಿಂದ ಉಭಯ ಮಠಗಳಲ್ಲಿನ ಮುಖ್ಯವಾಗಿ ನವವೃಂದಾವನದಲ್ಲಿರುವ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು ಹಾಗೂ ವಾಗೀಶ ತೀರ್ಥರ ವೃಂದಾವನದ ಆರಾಧನೆ ವೇಳೆ ಪೂಜೆ ಸಲ್ಲಿಸುವ ಕುರಿತು ಪರ-ವಿರೋಧ ಇದ್ದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯದ ನಿರ್ದೇಶನದಂತೆ ಉಭಯ ಮಠದ ಪೀಠಾಧಿಪತಿ ಮಾತುಕತೆ ಮೂಲಕ ವ್ಯಾಜ್ಯ ಪರಿಹಾರ ಕಂಡು ಕೊಳ್ಳಲು ಸೂಚಿಸಿತ್ತು. ಅದರಂತೆ ಸಂಧಾನದ ಫಲವಾಗಿ ಶನಿವಾರ ಮಧ್ಯಾಹ್ನ ಉಭಯ ಮಠದ ಶ್ರೀಗಳವರು ಸಮಾಗಮ ನಡೆಸಿ, ಕೂಡ್ಲಿಗಿ ಅಕ್ಷೋಭ್ಯ ತೀರ್ಥರ ಸಮ್ಮುಖದಲ್ಲಿ ಎರಡು ಮಠಗಳ ವಿದ್ವಾಂಸರು, ಪಂಡಿತರು, ನಿವೃತ್ತ ನ್ಯಾಯಾಧೀಶರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಿವೃತ್ತ ಎಡಿಜಿಪಿ ಭಾಸ್ಕರರಾವ್ ಸೇರಿದಂತೆ ಅಪಾರ ಭಕ್ತ ವೃಂದದ ಸಮ್ಮುಖದಲ್ಲಿ ನವವೃಂದಾವನದಲ್ಲಿರುವ ಯತಿ ತ್ರಯರ ವೃಂದಾವನದ ಪೂಜೆ ಪರ್ಯಾಯದ ಮೂಲಕ ಮಾಡುವುದಾಗಿ ಪರಸ್ಪರ ಒಮ್ಮತದ ಕರಾರು ಪತ್ರಕ್ಕೆ ಸಹಿ ಹಾಕಿ ಒಪ್ಪಿಗೆ ಸೂಚಿಸಿದ್ದಾರೆ.

ಇದು ಸಮಸ್ತ ಮಾಧ್ವ ಭಕ್ತ ಸಮೂಹಕ್ಕೆ ಹರ್ಷೋಲ್ಲಾಸದ ವಿಷಯವಾಗಿದೆ ಎಂದು ಬೀದರಿನ ವೇದವ್ಯಾಸ ವೇದಾಧ್ಯಯನ ಕೇಂದ್ರ ಸಂಚಾಲಕ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಸಂಘಟನಾ ಕಾರ್ಯದರ್ಶಿ ವಿ.ಕೆ. ದೇಶಪಾಂಡೆ ತಿಳಿಸಿದ್ದಾರೆ.

error: Content is protected !!