ಹೊಸ ದಿಗಂತ ವರದಿ, ಶಿವಮೊಗ್ಗ:
ಶಿಕಾರಿಪುರ-ಶಿವಮೊಗ್ಗ ಮಾರ್ಗದ ಟೋಲ್‌ಗೆ ವ್ಯಾಪಕ ವಿರೋಧ ಇದ್ದರೂ ಮರು ಟೆಂಡರ್ ಮಾಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಘೋಷಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕಾರಿಪುರ-ಶಿವಮೊಗ್ಗ ನಡುವೆ ಅವೈಜ್ಞಾನಿಕವಾಗಿ ಟೋಲ್‌ಗೇಟ್ ಅಳವಡಿಕೆ ಮಾಡಿರುವುದಕ್ಕೆ ಸ್ಥಳೀಯರು ತಾಳ್ಮೆ ಕಳೆದುಕೊಂಡಿದ್ದಾರೆ. ಈ ಬಗ್ಗೆ ನಾನು ವಿಧಾನಸೌಧದಲ್ಲಿ ಸಚಿವರ ಜೊತೆ ಸಭೆ ಮಾಡಿದ್ದೇನೆ. ಶಾಸಕರು ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಡಿಸಿ ಅವರು ಟೋಲ್ ಪರಿಷ್ಕರಣೆ ಮಾತು ಕೊಟ್ಟಿದ್ದರು. ಹಾಗಿದ್ದರೂ ಹೇಗೆ ಮರು ಟೆಂಡರ್ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆಗೆ ಆಗಮಿಸಿದ್ದ ಅಧಿಕಾರಿ, ಆಗಸ್ಟ್ ತಿಂಗಳಲ್ಲಿ ಮರು ಟೆಂಡರ್ ಆಗಿದೆ. ಜೊತೆಗೆ ಒಪ್ಪಂದವೂ ಆಗಿದೆ ಎಂದು ಮಾಹಿತಿ ನೀಡಿದರು.
ಕಡಿಮೆ ಅಂತರದಲ್ಲಿ ಎರಡು ಟೋಲ್‌ಗೇಟ್ ಅಳವಡಿಸಿರುವುದು ಸರಿಯಲ್ಲ. ಜನರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ಡಿಸಿ, ಎಸ್ಪಿ ಸ್ಥಳಕ್ಕೆ ಬಂದು ಟೋಲ್ ತೆರವು ಮಾಡುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರೂ ಅದು ಕಾರ್ಯಗತಗೊಂಡಿಲ್ಲ. ಈಗ ಹೋರಾಟ ಮಾಡುವುದು ಒಂದೇ ದಾರಿ ಎಂದು ತಿಳಿಸಿದರು.