Sunday, October 12, 2025

ಬಾಕಿ ತುಟ್ಟಿಭತ್ಯೆ ಬಿಡುಗಡೆ ಮಾಡಿ: ಸಿಎಂಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ರಾಜ್ಯ ಸರ್ಕಾರವು ನಗದು ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವುದು ಸಹ ಸಂಪ್ರದಾಯವಾಗಿರುತ್ತದೆ. ಹೀಗಾಗಿ ಬಾಕಿ ಇರುವ ತುಟ್ಟಿಭತ್ಯೆ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೋರಿದೆ.

ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಉಲ್ಲೇಖಿತ ಆದೇಶದಲ್ಲಿ ದಿನಾಂಕ: 01-07-2025ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೂ ದಿನಾಂಕ: 01-07-2025 ರಿಂದ ಅನ್ವಯವಾಗುವಂತೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಕೋರಿದ್ದಾರೆ.

error: Content is protected !!