Sunday, November 2, 2025

ರೇಣುಕಾಸ್ವಾಮಿ ಕೊಲೆ ಕೇಸ್‌: ಇಂದು ತೀರ್ಮಾನವಾಗಲಿದೆ ನಟ ದರ್ಶನ್‌ ಭವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಅತ್ಯಂತ ನಿರ್ಣಾಯಕ ದಿನ. ಪ್ರಕರಣದ ವಿಚಾರಣೆ ಇಂದು ನಡೆಯಲಿದ್ದು, ಕೋರ್ಟ್‌ನಲ್ಲಿ ಕೊಲೆ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯಾಗಲಿದೆ. ಈ ಕೇಸ್‌ನ ಪ್ರಮುಖ ಸಾಕ್ಷಿಯೊಂದರ ಮೇಲೆ ದರ್ಶನ್ ಭವಿಷ್ಯ ನಿಂತಿದೆ ಎನ್ನಲಾಗುತ್ತಿದ್ದು, ಇಡೀ ವಿಚಾರಣೆಗೆ ರಾಜ್ಯದ ಕಣ್ಣು ನೆಟ್ಟಿದೆ. ದರ್ಶನ್‌ಗಷ್ಟೇ ಅಲ್ಲ, ‘ಡಿ ಗ್ಯಾಂಗ್’ಗೂ ಇದು ಕಾನೂನು ಹಾದಿಯ ಕಠಿಣ ಹಂತವಾಗಲಿದೆ.

ಇಂದು ಸಿಸಿಎಚ್ 64ನೇ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಕಡ್ಡಾಯವಾಗಿ ಹಾಜರಾಗಬೇಕಿದೆ. ಆರೋಪಿಗಳ ವಿರುದ್ಧ ದಾಖಲಾಗಿರುವ ಸೆಕ್ಷನ್‌ಗಳ ಆಧಾರದ ಮೇಲೆ ದೋಷಾರೋಪ ನಿಗದಿಯಾಗಲಿದೆ. ಪರಪ್ಪನ ಅಗ್ರಹಾರ ಕಾರಾಗೃಹದಿಂದ ಎಲ್ಲ ಆರೋಪಿಗಳನ್ನು ಕೋರ್ಟ್‌ಗೆ ತರಲಾಗುತ್ತಿದ್ದು, ಮಧ್ಯಾಹ್ನ ಮೂರು ಗಂಟೆಗೆ ಚಾರ್ಜ್‌ ಫ್ರೇಮ್ ವಿಚಾರಣೆ ನಡೆಯಲಿದೆ.

ಪ್ರಕರಣದಲ್ಲಿ ಅತ್ಯಂತ ಪ್ರಮುಖವಾದ ಟೆಕ್ನಿಕಲ್ ಎವಿಡೆನ್ಸ್‌ಗಳು ಈಗ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಈ ಸಾಕ್ಷಿಯೇ ದರ್ಶನ್ ಭವಿಷ್ಯವನ್ನು ತೀರ್ಮಾನಿಸಬಹುದು ಎನ್ನಲಾಗುತ್ತಿದೆ. ಪೊಲೀಸರು ಕಲೆಹಾಕಿರುವ ಡಿಜಿಟಲ್ ದಾಖಲೆಗಳು ಮತ್ತು ತಾಂತ್ರಿಕ ಸಾಬೀತುಗಳು ಕೋರ್ಟ್ ಮುಂದೆ ಪ್ರಮುಖ ಆಧಾರಗಳಾಗಿ ಇರಲಿವೆ.

ಇದಲ್ಲದೆ, ನ್ಯಾಯಾಲಯದಲ್ಲಿ ನ್ಯಾಯಾಧೀಶರು ಪ್ರತಿ ಆರೋಪಿಗೆ ವಿರುದ್ಧ ದಾಖಲಾಗಿರುವ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 364 (ಅಪಹರಣ) ಮತ್ತು 202 (ಸಾಕ್ಷಿ ನಾಶ) ಕುರಿತು ಓದಿ ಹೇಳಿಸಲಿದ್ದಾರೆ.

ಆರೋಪಿಗಳ ಹಾಜರಾತಿ ಪಡೆದ ನಂತರ ಕೋರ್ಟ್ ಚಾರ್ಜ್‌ ಫ್ರೇಮ್ ಪ್ರಕ್ರಿಯೆ ಮುಂದುವರಿಸಲಿದ್ದು, ಬಳಿಕ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಹೀಗಾಗಿ, ಇಂದು ನಡೆಯಲಿರುವ ಈ ವಿಚಾರಣೆ ದರ್ಶನ್ ಮತ್ತು ಅವರ ತಂಡದ ಕಾನೂನು ಪ್ರಯಾಣಕ್ಕೆ ಮುಖ್ಯ ತಿರುವಾಗಲಿದೆ.

error: Content is protected !!