ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಆದರೆ ಇಂದು ಅವರಿಗೆ ಮಹತ್ವದ ದಿನ. ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೇ ಅಥವಾ ಬೆಂಗಳೂರಿನಲ್ಲೇ ಉಳಿಸಬೇಕೇ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ. ಇದೇ ವೇಳೆ ಎ1 ಆರೋಪಿ ಪವಿತ್ರಗೌಡ ಅವರ ಜಾಮೀನು ಅರ್ಜಿಯ ಮೇಲೂ ಇಂದು ತೀರ್ಪು ಬರಲಿದೆ.
ಸರ್ಕಾರಿ ಪರ ವಕೀಲರು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆದರೆ, ದರ್ಶನ್ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಟ್ರಯಲ್ ಶೀಘ್ರ ಪ್ರಾರಂಭವಾಗಲಿದ್ದು, ಪ್ರತೀ ಬಾರಿ ಬಳ್ಳಾರಿಯಿಂದ ಕರೆತರಲು ತೊಂದರೆ ಆಗುತ್ತದೆ ಎಂದು ವಾದಿಸಿದ್ದಾರೆ. ಜೊತೆಗೆ ದರ್ಶನ್ ಅವರ ತಾಯಿಗೆ ಕ್ಯಾನ್ಸರ್ ಇದ್ದ ಕಾರಣ, ಬೆಂಗಳೂರಿನಲ್ಲಿ ಇರಿಸುವಂತೆ ಮನವಿ ಮಾಡಿದ್ದಾರೆ.
ಪವಿತ್ರಗೌಡ ಜಾಮೀನು ನಿರ್ಧಾರ
ಎ1 ಆರೋಪಿ ಪವಿತ್ರಗೌಡಗೆ ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನು ರದ್ದುಮಾಡಿ ಜೈಲಿಗೆ ಕಳುಹಿಸಿತ್ತು. ಆದರೆ ಜೈಲಿಗೆ ಹೋದ ಕೆಲವೇ ದಿನಗಳಲ್ಲಿ ಅವರು ಮತ್ತೆ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಹಾಕಿದ್ದಾರೆ. ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಪವಿತ್ರಗೌಡ ಪರ ವಕೀಲರು ಜಾಮೀನು ನೀಡುವಂತೆ ಕೇಳಿಕೊಂಡಿದ್ದಾರೆ. ಇತ್ತ ಸರ್ಕಾರಿ ಪರ ವಕೀಲರು ಕಾನೂನು ಬದ್ಧತೆ ಕುರಿತು ತೀವ್ರ ವಾದ ಮಂಡಿಸಿದ್ದಾರೆ.
ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕಳುಹಿಸುವ ವಿಚಾರ ಮತ್ತು ಪವಿತ್ರಗೌಡ ಜಾಮೀನು ಕುರಿತ ತೀರ್ಪು ಇಂದು ಹೊರಬರಲಿದ್ದು, ಕೋರ್ಟ್ ಏನು ತೀರ್ಮಾನಿಸುತ್ತದೆ ಎಂಬ ಕುತೂಹಲ ಎಲ್ಲೆಡೆ ಹೆಚ್ಚಿದೆ.