ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳ ಜೈಲು ಸ್ಥಳಾಂತರ ಕುರಿತ ಅರ್ಜಿ ವಿಚಾರಣೆಯನ್ನು ಸಿಸಿಎಚ್ 57ನೇ ಕೋರ್ಟ್ ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ. ಆರೋಪಿಗಳನ್ನು ಬಳ್ಳಾರಿ, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ ಜೈಲುಗಳಿಗೆ ಸ್ಥಳಾಂತರಿಸುವಂತೆ ಸಲ್ಲಿಸಲಾದ ಮನವಿಯ ಕುರಿತು ನ್ಯಾಯಾಲಯದಲ್ಲಿ ಚರ್ಚೆ ನಡೆಯಿತು.
ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ ಹಾಗೂ ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲು ಪ್ರಸ್ತಾಪ ಮಾಡಲಾಗಿದೆ. ಆದರೆ ದರ್ಶನ್, ಲಕ್ಷಣ್, ನಾಗರಾಜ್ ಹಾಗೂ ಪ್ರದೂಷ್ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲರು, ಟ್ರಯಲ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಬಳ್ಳಾರಿಗೆ ಶಿಫ್ಟ್ ಮಾಡಿದರೆ ವಿಚಾರಣೆಗೆ ಹಾಜರುಪಡಿಸಲು ಹಾಗೂ ವಕೀಲರ ಭೇಟಿ ಸಾಧ್ಯವಾಗುವುದಿಲ್ಲ ಎಂದು ವಾದ ಮಂಡಿಸಿದರು. ಜೊತೆಗೆ ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮಗನನ್ನು ನೋಡಲು ಅವರಿಗೆ ಅಡಚಣೆಯಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇನ್ನೂ, ದರ್ಶನ್ ಪರ ವಕೀಲರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮ್ಯಾನ್ಯುಯಲ್ ಪ್ರಕಾರ ನೀಡಬೇಕಾದ ಅನುಕೂಲಗಳನ್ನು ನೀಡುತ್ತಿಲ್ಲ ಎಂದು ದೂರಿದ್ದಾರೆ. ಚಳಿಗಾಲ ಇರುವುದರಿಂದ ದಿಂಬು, ಬ್ಲ್ಯಾಂಕೇಟ್ ಹಾಗೂ ಹೆಚ್ಚುವರಿ ಬಟ್ಟೆ, ನೈಟ್ ಡ್ರೆಸ್ ನೀಡಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ. ಈ ಮನವಿಗೂ ವಿಚಾರಣೆ ಸೆ.2ಕ್ಕೆ ಮುಂದೂಡಲಾಗಿದೆ.
ಸಿಸಿಎಚ್ 64ನೇ ಕೋರ್ಟ್‌ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ಅವರು, ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಸಿರುವುದು ಕಾನೂನುಬಾಹಿರವಾಗಿದೆ ಎಂದು ವಾದಿಸಿದರು. ಹೀಗಾಗಿ ಪವಿತ್ರಾ ಗೌಡ ಕಡ್ಡಾಯ ಜಾಮೀನು ಪಡೆಯಲು ಅರ್ಹರು ಎಂದು ಹೇಳಿದರು.