Saturday, November 1, 2025

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಭಾಷಣದ ವೇಳೆ ಪುನರಾವರ್ತಿತ ವಿದ್ಯುತ್ ಅಡಚಣೆ

ಹೊಸದಿಗಂತ ವರದಿ ಧಾರವಾಡ:

ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯೋತ್ಸವದ ಪ್ರಮುಖ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭಾಷಣ ಮಾಡುವ ವೇಳೆ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗಿ ಕಾರ್ಯಕ್ರಮದ ಮೆರುಗಿಗೆ ಭಂಗ ತಂದಿದೆ.

ಸಚಿವರ ಭಾಷಣಕ್ಕೆ ಅಡಚಣೆ ನ. 1 ರಂದು ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಸಚಿವ ಲಾಡ್, ಧ್ವಜಾರೋಹಣ ನೆರವೇರಿಸಿ ಭಾಷಣಕ್ಕೆ ಅಣಿಯಾದ ಕೆಲವೇ ನಿಮಿಷಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು.

ಇದು ಒಮ್ಮೆ ಮಾತ್ರವಲ್ಲದೇ, ಸಚಿವರ ಭಾಷಣ ಮುಂದುವರಿದಂತೆ ಪುನಃ ಪುನಃ ವಿದ್ಯುತ್ ಕೈಕೊಟ್ಟಿರುವುದು ಸಾರ್ವಜನಿಕರನ್ನು ಮುಜುಗರಕ್ಕೆ ದೂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಪೊಲೀಸ್ ಆಯುಕ್ತರು, ತಹಶಿಲ್ದಾರ್ ಸೇರಿ ಅನೇಕರು ಓಡಾಡಿ ವಿದ್ಯುತ್ ಅಡಚಣೆ ನಿವಾರಿಸಿದ ಬಳಿಕ ಭಾಷಣ ಆರಂಭಿಸಿದ ತಕ್ಷಣ ಪುನಃ ವಿದ್ಯುತ್ ಸ್ಥಗಿತಗೊಂಡಿತು.

ರಾಜ್ಯೋತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ವಿದ್ಯುತ್ ಪೂರೈಕೆ ಸರಿಯಾಗಿ ನಿರ್ವಹಿಸದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ವಾತಾವರಣದಲ್ಲಿ ಪ್ರಮುಖ ಅತಿಥಿಗಳ ಭಾಷಣದ ವೇಳೆಯೂ ಅಡಚಣೆಯಾಗಿದ್ದು, ಜಿಲ್ಲಾಡಳಿತ ಹಾಗೂ ಹೆಸ್ಕಾಂ (HESCOM)ನ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ.

ಈ ಕುರಿತು ಸ್ಥಳದಲ್ಲಿದ್ದ ಕೆಲವು ಅಧಿಕಾರಿಗಳು ಪ್ರತಿಕ್ರಿಯಿಸಿ, ಹಳೆಯ ವಿದ್ಯುತ್ ತಂತಿಗಳಲ್ಲಿ ಉಂಟಾದ ತಾಂತ್ರಿಕ ದೋಷ ಮತ್ತು ಓವರ್‌ಲೋಡ್‌ನಿಂದಾಗಿ ಈ ಸಮಸ್ಯೆ ಎದುರಾಗಿದೆ. ಕೂಡಲೇ ಜನರೇಟರ್‌ಗಳ ಮೂಲಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಯಿತು ಎಂದು ಸಮಜಾಯಿಷಿ ನೀಡಿದರು.

ಆದರೆ, ತುರ್ತು ಪರಿಸ್ಥಿತಿಗಾಗಿ ಸಿದ್ಧಪಡಿಸಿದ್ದ ಜನರೇಟರ್‌ ಸಹ ತಕ್ಷಣಕ್ಕೆ ಕಾರ್ಯನಿರ್ವಹಿಸದೇ ಇರುವುದು ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ. ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಉಂಟಾದ ಈ ಅಡಚಣೆ, ಜಿಲ್ಲೆಯ ಘನತೆಗೆ ಕುಂದು ತಂದಂತಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯುತ್ ಅಡಚಣೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

error: Content is protected !!