ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಿಷಭ್ ಶೆಟ್ಟಿ ಹೈದರಾಬಾದ್‌ನಲ್ಲಿ ನಡೆದ ಕಾಂತಾರ ಈವೆಂಟ್‌ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದರು. ಕನ್ನಡದ ಆಡಿಯನ್ಸ್‌ಗೆ ಇದರಿಂದ ರಿಷಭ್ ಮೇಲಿನ ಗೌರವ ಹೆಚ್ಚಾಗಿತ್ತು. ಆದರೆ ತೆಲುಗು ಫ್ಯಾನ್ಸ್‌ಗೆ ಇದು ಇಷ್ಟವಾಗಿಲ್ಲ.
ಇದೇ ಕಾರಣದಿಂದ ಬಾಯ್ಕಾಟ್ ಕಾಂತಾರ ಎಂದು ಹೇಳಲಾಗಿತ್ತು. ಆದರೆ ಇದೀಗ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಭ್ ತೆಲುಗುವಿನಲ್ಲಿ ಮಾತನಾಡಿದ್ದಾರೆ. ಇದರಿಂದ ಫ್ಯಾನ್ಸ್ ಸಿಟ್ಟು ಕಡಿಮೆಯಾಗಿದೆ.
ತೆಲುಗಿನಲ್ಲೇ ಮಾತು ಆರಂಭಿಸಿದ ರಿಷಬ್ ಶೆಟ್ಟಿ, ‘ಮೂರು ವರ್ಷಗಳ ಹಿಂದೆ ಇದೇ ದಿನ ನಮ್ಮ ‘ಕಾಂತಾರ’ ಸಿನಿಮಾ ಬಿಡುಗಡೆ ಆಗಿತ್ತು, ಆ ಸಿನಿಮಾಕ್ಕೆ ಬಹಳ ಪ್ರೀತಿ, ಆಶೀರ್ವಾದ ಕೊಟ್ಟಿದ್ದೀರಿ, ಈಗ ಮತ್ತೆ ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಆಗುತ್ತಿದೆ. ಆ ಸಿನಿಮಾಕ್ಕೆ ನಿಮ್ಮ ಪ್ರೀತಿ, ಆಶೀರ್ವಾದ ಬೇಕಿದೆ’ ಎಂದು ಅರೆ-ಬರೆ ತೆಲುಗಿನಲ್ಲೇ ಹೇಳಿದರು. ದಸರಾ ಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದರು.
ಬಳಿಕ, ‘ಜೂ ಎನ್ಟಿಆರ್, ಡಾರ್ಲಿಂಗ್ ಪ್ರಭಾಸ್, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮತ್ತು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ನಾನು ಅಪ್ಪಟ ಕನ್ನಡಿಗ, ಕನ್ನಡ ಭಾಷೆಯ ಅಭಿಮಾನಿ, ಹಾಗಿದ್ದಾಗ ನಾನು ಸಹೋದರ ಭಾಷೆಯನ್ನು ಅಷ್ಟೇ ಗೌರವದಿಂದ ಕಾಣುತ್ತೇನೆ. ಕನ್ನಡ ಮತ್ತು ತೆಲುಗು ಪರಸ್ಪರ ಸಹೋದರ ಭಾಷೆಗಳು. ಒಗ್ಗಟ್ಟಿನ ಭಾಷೆಗಳು’ ಎಂದರು.
ಮಾತು ಮುಂದುವರೆಸಿ, ‘ನನ್ನ ಜೈ ಹನುಮಾನ್’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಇದಕ್ಕಿಂತಲೂ ಉತ್ತಮವಾಗಿ ತೆಲುಗು ಮಾತನಾಡುವುದನ್ನು ಕಲಿತಿರುತ್ತೇನೆ’ ಎಂಬ ಭರವಸೆಯನ್ನು ಸಹ ರಿಷಬ್ ಶೆಟ್ಟಿ ನೀಡಿದರು.