ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧರಾಗಿದ್ದು, ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಹಾವಳಿಗೆ ಸಂಬಂಧಿಸಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿಗಳು ನೈಸರ್ಗಿಕ ಕಾರಣಗಳು ಮತ್ತು ಭಾರೀ ಮಳೆಯಿಂದಾಗಿ ಸೃಷ್ಟಿಯಾಗುತ್ತವೆ.
ಅವುಗಳನ್ನು ನಾವು ಬೇಕೆಂದೇ ಮಾಡುವುದಿಲ್ಲ, ಸಮಸ್ಯೆಯನ್ನು ಬಗೆಹರಿಸಲು ನಾವು ಇಲ್ಲಿದ್ದೇವೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಲಿ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಭೆ ನಡೆಸುತ್ತಿದ್ದಾರೆ. ಗುಂಡಿಗಳು ಪ್ರಕೃತಿಯಿಂದ ಉಂಟಾಗುತ್ತವೆ; ಯಾರೂ ಅವುಗಳನ್ನು ಸೃಷ್ಟಿಸಲು ಬಯಸುವುದಿಲ್ಲ ಎಂದರು.