Monday, December 22, 2025

ಇನ್ವಿಟೇಷನ್‌ ಕೊಡುವ ನೆಪದಲ್ಲಿ ಬಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ನೆರಳೂರು ಗ್ರಾಮದ ವಾಸಿ ರವಿಕುಮಾರ್ ಮನೆಯಲ್ಲಿ ಖತರ್ನಾಕ್ ದಂಪತಿಯಿಂದ ಈ ದರೋಡೆ ನಡೆದಿದೆ. ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಸಹ ಕೆಲಸಕ್ಕೆ ಎಂದು ಹೋಗಿದ್ದಾಗ ಮನೆಯಲ್ಲಿ ರವಿಕುಮಾರ್ ಪತ್ನಿ ನಾಗವೇಣಿ ಒಬ್ಬರೇ ಇದ್ದರು.

ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಖತರ್ನಾಕ್ ಜೋಡಿ ಇನ್ವಿಟೇಶನ್ ಕಾರ್ಡ್ ಕೊಡುವ ನೆಪದಲ್ಲಿ ಮನೆ ಒಳಗೆ ಬಂದು ಕುಡಿಯಲು ನೀರು ಕೇಳಿದ್ದಾರೆ. ನೀರು ತರಲೆಂದು ಅಡುಗೆ ಮನೆಗೆ ಹೋದ ನಾಗವೇಣಿಯನ್ನು ಪುರುಷ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿದ್ದಾರೆ. ನಂತರ ಚಾಕು ಇಟ್ಟು ಬೀರುವಿನ ಲಾಕರ್ ಕೀ ಪಡೆದು ಸುಮಾರು 200 ಗ್ರಾಂ ಚಿನ್ನಾಭರಣ ಕದ್ದು ಅಲ್ಲಿಂದ ಜೋಡಿ ಎಸ್ಕೇಪ್ ಆಗಿದ್ದಾರೆ.

ಬಳಿಕ ನಾಗವೇಣಿ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ ಕೆ ಬಾಬಾ ಮತ್ತು ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!