ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಮುಂಬೈನಲ್ಲಿನ ವಿಶೇಷ ಸೆಟ್‌ಗಳಲ್ಲಿ ಜೋರಾಗಿ ನಡೆದಿತ್ತು. ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈಗ ಈ ಶೆಡ್ಯೂಲ್ ಮುಗಿದ ಹಿನ್ನೆಲೆಯಲ್ಲಿ ಯಶ್ ನೇರವಾಗಿ ಲಂಡನ್‌ಗೆ ಹಾರಿದ್ದು, ಅಲ್ಲಿ ದೊಡ್ಡ ಕೊಲಾಬರೇಷನ್‌ಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಜಾನ್ ವಿಕ್’, ‘ಡೇ ಶಿಫ್ಟ್’ ಸಿನಿಮಾಗಳಿಗೆ ಆ್ಯಕ್ಷನ್ ನೀಡಿದ ಖ್ಯಾತ ನಿರ್ದೇಶಕ ಜೆಜೆ ಪೆರ್ರಿ, ಈ ಬಾರಿ ಕನ್ನಡದ ‘ಟಾಕ್ಸಿಕ್’ಗಾಗಿ ಭಾರತಕ್ಕೆ ಆಗಮಿಸಿದ್ದರು. ಮುಂಬೈನಲ್ಲಿ ಒಂದು ತಿಂಗಳ ಕಾಲ ನೆಲೆಸಿದ್ದ ಅವರು ಚಿತ್ರದಲ್ಲಿನ ಹೈ ವೋಲ್ಟೇಜ್ ಫೈಟ್ ಸೀಕ್ವೆನ್ಸ್‌ಗಳನ್ನು ನಿರ್ದೇಶಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದ್ದು, ಉಳಿದ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಯಶ್ ಈಗ ಲಂಡನ್‌ಗೆ ತೆರಳಿ ಅಲ್ಲಿನ ಪ್ರಮುಖ ನಿರ್ಮಾಣ ಸಂಸ್ಥೆಗಳ ಜೊತೆ ಹಂಚಿಕೆ ಕುರಿತಂತೆ ಮಾತುಕತೆ ನಡೆಸುತ್ತಿದ್ದಾರೆ. ಚಿತ್ರವನ್ನು ವಿಶ್ವ ಮಟ್ಟದಲ್ಲಿ ಬಿಡುಗಡೆ ಮಾಡಲು ಈ ಮಾತುಕತೆ ನಿರ್ಣಾಯಕವೆಂದು ಹೇಳಲಾಗುತ್ತಿದೆ.
ಈಗಾಗಲೇ ಅಮೆರಿಕಾದ ಕೆಲ ನಿರ್ಮಾಣ ಸಂಸ್ಥೆಗಳ ಜೊತೆ ಯಶ್ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ಹೊರಬಿದ್ದಿದೆ. ಲಂಡನ್‌ನಲ್ಲಿ ನಡೆಯಲಿರುವ ಹೊಸ ಡೀಲ್ ಚಿತ್ರಕ್ಕೆ ಇನ್ನಷ್ಟು ಭಾರೀ ವಿಸ್ತಾರ ತರುವ ಸಾಧ್ಯತೆಗಳಿವೆ. ಅಭಿಮಾನಿಗಳಲ್ಲಿ ಇದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್‌ನಲ್ಲಿ ತೆರೆಗೆ ಬರಲಿದ್ದು, ದೊಡ್ಡ ಮಟ್ಟದಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದೆ.