ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್ ಅವರು ಎಲ್ಲೇ ಕಾಣಿಸಿಕೊಂಡರೂ ತಮ್ಮದೇ ಆದ ಗತ್ತು ಮತ್ತು ಶೈಲಿಯಿಂದ ಗಮನ ಸೆಳೆಯುತ್ತಾರೆ. ಇದೀಗ ಯಶ್ ಅವರ ಹೊಸ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಹ್ಯಾಂಡ್ಸಮ್ ಹಂಕ್ ರೂಪದಲ್ಲಿ ಮಿಂಚಿದ್ದಾರೆ.
‘ಉಗ್ರಂ’, ಬ್ಲಾಕ್‌ಬಸ್ಟರ್ ಸಿನಿಮಾಗಳಾದ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿರುವ ಭುವನ್ ಗೌಡ ಅವರ ವಿವಾಹ ಸಮಾರಂಭಕ್ಕೆ ಯಶ್ ಹಾಜರಿ ನೀಡಿದರು. ನವದಂಪತಿಗಳಿಗೆ ಶುಭ ಕೋರಿದ ಯಶ್, ಖುಷಿಯಿಂದ ಅಕ್ಷತೆ ಹಾಕಿ ಹಾರೈಸಿದರು. ಯಶ್ ಆಗಮನದಿಂದ ವರ ಭುವನ್ ಗೌಡ ಮತ್ತು ಅವರ ಕುಟುಂಬದವರು ಬಹಳ ಸಂತೋಷಗೊಂಡರು.
ಈ ವಿವಾಹ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ಭಾಗವಹಿಸಿದ್ದರು. ವಿಶೇಷವಾಗಿ ‘ಕೆಜಿಎಫ್’ ಬಳಿಕ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಒಂದೇ ವೇದಿಕೆಯಲ್ಲಿ ಭೇಟಿಯಾಗಿದ್ದು ಗಮನ ಸೆಳೆಯಿತು. ‘ಕೆಜಿಎಫ್ 3’ ಸೆಟ್ಟೇರುವ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲವಾದರೂ, ಈ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಭುವನ್ ಗೌಡ ಅವರ ಮದುವೆಗೆ ನಟಿ ಶ್ರೀನಿಧಿ ಶೆಟ್ಟಿ, ಶ್ರೀಲೀಲಾ, ಗರುಡಾ ರಾಮ್, ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ಆಗಮಿಸಿದ್ದರು.
ಯಶ್ ಅವರು ಮದುವೆಯಲ್ಲಿ ಕಂಡಿರುವ ಹ್ಯಾಂಡ್ಸಮ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಇದರ ಜೊತೆಗೆ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

