Wednesday, December 10, 2025

ಪ್ರಸಕ್ತ ವರ್ಷ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ: ಸಚಿವ ಕೃಷ್ಣ ಭೈರೇಗೌಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಸದನಕ್ಕೆ ಈ ಮಾಹಿತಿ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿದ್ದು, 118.5 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದೆ. ಆದರೆ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದಾಗಿ ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, 2023 ರಲ್ಲಿ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದಾಗ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ನಮ್ಮ ಸರ್ಕಾರ ಸುಪ್ರಿಂಕೋರ್ಟ್ ಮೊರೆಹೋಗಿ ಪರಿಹಾರ ಕೇಳುವ ಪ್ರಸಂಗ ಬರುವಂತಾಯಿತು.

38 ಲಕ್ಷ ರೈತರಿಗೆ ಸುಮಾರು 4300 ಕೋಟಿ ರೂ. ಪರಿಹಾರವನ್ನು ನಾವು ಕೊಟ್ಟಿದ್ದೇವೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ ಈಗಾಗಲೇ 2,249 ಕೋಟಿ ರೂ. ಪರಿಹಾರವನ್ನು ನೀಡಿದ್ದೇವೆ. ಸರ್ಕಾರದ ವೈಫಲ್ಯ ಇದ್ದರೆ ಟೀಕೆ ಮಾಡಲಿ, ಆದರೆ ಮಾಡಿದ ಕೆಲಸವನ್ನು ಮಾಡಿಯೇ ಇಲ್ಲ ಎಂದರೆ, ಅದನ್ನು ಕೇಳಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

error: Content is protected !!