ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕಬ್ಬನ್ ಪಾರ್ಕ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಹವಾಲು ಸ್ವೀಕರಿಸಿ ಮಾತನಾಡಿದರು.
ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.
ನಾನು ನೋಡಿದಂತೆ ಕಬ್ಬನ್ ಪಾರ್ಕ್ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ನಾನು ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿಯನ್ನ ಕಬ್ಬನ್ ಪಾರ್ಕ್ ತೋರಿಸಲು ಕರೆದುಕೊಂಡು ಬಂದಿದ್ದೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆವು ಎಂದರು.
ಅರಣ್ಯ ಇಲಾಖೆಯ ಜೊತೆ ಚರ್ಚೆ ಮಾಡಿ ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡಿ, ‘ಟ್ರೀ ಪಾರ್ಕ್’ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಕಾಡಿನ ಸಂರಕ್ಷಣೆಯೂ ಆದಂತೆ ಆಗುತ್ತದೆ. ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇನೆ ಎಂದರು.

