ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠವು ಇಂದು ನ.7ರಂದು ಶುಕ್ರವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದೆ.
ಕಳೆದ ಅ.28ರಂದು ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಸಂಘಟಕರ ಶಾಂತಿ ಸಭೆಯನ್ನು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿ,ಅ.30ಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಆದರೆ,ಶಾಂತಿ ಸಭೆಯಲ್ಲಿ ಸಂಘಟನೆಗಳಿಂದ ಯಾವುದೇ ರೀತಿಯ ಒಮ್ಮತದ ನಿರ್ಧಾರಕ್ಕೆ ಬರದ ಕಾರಣ ಹೈಕೋರ್ಟ್ ಪೀಠ ನ.5ರಂದು 2ನೇ ಸುತ್ತಿನ ಮತ್ತೊಂದು ಸಭೆಯನ್ನು ಬೆಂಗಳೂರಿನಲ್ಲಿ ಎಜೆ ಶಶಿ ಕಿರಣ್ ಶೆಟ್ಟಿ ಕಚೇರಿಯಲ್ಲಿ ನಡೆಸಿ,ನ.7ಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಇಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದ್ದು,ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಸಂಬಂಧಿಸಿದಂತೆ ಎಲ್ಲರ ಚಿತ್ತ ಹೈಕೋರ್ಟ್ನತ್ತ ವಾಲಿದೆ.
ಬೆಂಗಳೂರಿನಲ್ಲಿ 2ನೇ ಹಂತದ ಶಾಂತಿ ಸಭೆ
ಕಳೆದ ಅ.30ರಂದು ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠದ ನಿರ್ದೇಶನದಂತೆ ಎಜೆ ಶಶಿ ಕಿರಣ್ ಶೆಟ್ಟಿ ನೇತೃತ್ವದಲ್ಲಿ ನ.5ರಂದು ಬೆಂಗಳೂರಿನ ಎಜೆ ಕಚೇರಿಯಲ್ಲಿ 2ನೇ ಹಂತದ ಮತ್ತೊಂದು ಶಾಂತಿ ಸಭೆ ನಡೆಸಿ, ಒಮ್ಮತದ ನಿರ್ಧಾರ ಕೈಗೊಂಡು, ವರದಿ ಸಲ್ಲಿಸುವಂತೆ ಕಳೆದ ವಿಚಾರಣೆಯಲ್ಲಿ ಪೀಠ ಹೇಳಿದೆ. ಹೈಕೋರ್ಟ್ ಆದೇಶದಂತೆ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಆರೆಸ್ಸೆಸ್ ಪರ ಅರ್ಜಿದಾರ ಅಶೋಕ್ ಪಾಟೀಲ್, ಕೃಷ್ಣ ಜೋಶಿ, ಹಿರಿಯ ವಕೀಲರಾದ ಅರುಣ್ ಶ್ಯಾಂ, ಸತ್ಯನಾರಾಯಣ ಕಾಡಲೂರ್, ಕಲಬುರಗಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್, ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹಾಗೂ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ಇತರೆ ಅಧಿಕಾರಿಗಳು ಬೆಂಗಳೂರಿನಲ್ಲಿ ಶಾಂತಿ ಸಭೆಯಲ್ಲಿ ಭಾಗಿಯಾಗಿದ್ದಾರೆ.

