Friday, November 7, 2025

ಪಂಚಾಯತ್‌ ರಾಜ್‌ ಸಿಬ್ಬಂದಿಗೆ ವೇತನ ಹೆಚ್ಚಳ, ಪ್ರಯಾಣ ಭತ್ಯೆ: ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡುವಂತೆ ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಮನವಿ ಮಾಡಿದ್ದಾರೆ.

ಆರ್‌ಡಿಪಿಆರ್‌ ಸೆಕ್ರೆಟರಿ ಸಮೀರ್‌ ಶುಕ್ಲಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಮೂರು ದಶಕಗಳಿಂದ ವೇತನ ಹೆಚ್ಚಳ ಆಗಿಲ್ಲ, ಇದರ ಜತೆಗೆ ಸಿಬ್ಬಂದಿಗೆ ಪ್ರಯಾಣ ಭತ್ಯೆ, ಫೋನ್‌ ಭತ್ಯೆ ಕೂಡ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಸಿಬ್ಬಂದಿಗೆ ಪ್ರಯಾಣ ಭತ್ಯೆ ಕೂಡ ನೀಡಬೇಕು ಎಂದು ಪಂಚಾಯತ್‌ ರಾಜ್‌ ನೀತಿಯಲ್ಲಿದೆ. ಆದರೆ ಯಾರಿಗೂ ಯಾವುದೇ ರೀತಿ ವೇತನ ಸಿಗುತ್ತಿಲ್ಲ ಎಂದಿದ್ದಾರೆ.

ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಪಂಚಾಯತಿ ಸಿಬ್ಬಂದಿಯ ಮಹತ್ತರ ಕೊಡುಗೆ ಇದೆ. ಅವರಿಗೆ ಇತರೆ ಸೌಲಭ್ಯಗಳನ್ನು ನೀಡಿದರೆ ಕಾರ್ಯಕ್ಷಮತೆ ಹೆಚ್ಚುತ್ತದೆ. ನಿಯಮದ ಪ್ರಕಾರ ಯಾವುದಾದರೂ ಸ್ಥಳಕ್ಕೆ ಬಸ್‌ ಅಥವಾ ಲೋಕಲ್‌ ಟ್ರಾನ್ಸ್‌ಪೋರ್ಟ್‌ ಇಲ್ಲದಿದ್ದರೆ ಅಂಥ ಜಾಗಕ್ಕೆ ಹೋಗುವಾಗ ಅವರಿಗೆ ಕಿಲೋಮೀಟರ್‌ಗೆ 40 ಪೈಸೆ ಭತ್ಯೆ ನೀಡಬೇಕು.

ಸಿಬ್ಬಂದಿಗೆ ದಿನಕ್ಕೆ 35 ರೂಪಾಯಿ ಟ್ರಾವೆಲ್‌ ಅಲೋಯೆನ್ಸ್‌ ನೀಡಬೇಕಿದೆ. ಆದರೆ ಯಾರಿಗೂ ಅಲೋಯೆನ್ಸ್‌ ಸಿಗುತ್ತಿಲ್ಲ. ಸ್ವಂತ ಹಣದಿಂದ ಓಡಾಡುವಂತಾಗಿದೆ. ದಿನಕ್ಕೆ 35 ರೂಪಾಯಿ ಟ್ರಾವೆಲ್‌ ಅಲೋಯೆನ್ಸ್‌ನಿಂದ ಓಡಾಡೋದು ಅಸಾಧ್ಯ. ಈ ನಿಯಮಗಳನ್ನು ಮೂರು ದಶಕಗಳ ಹಿಂದೆ ಮಾಡಲಾಗಿತ್ತು. ಇದೀಗ ಈ ನಿಯಮಗಳನ್ನು ಬದಲಾಯಿಸುವ ಸಮಯ ಬಂದಿದೆ. ಕಿಲೋಮೀಟರ್‌ಗೆ 15 ರೂಪಾಯಿಯಂತೆ ನೀಡಬೇಕು, ಜತೆಗೆ ಸಾವಿರ ರೂಪಾಯಿ ಅಲೋಯೆನ್ಸ್‌ ನೀಡಬೇಕು. ಜತೆಗೆ ಫೋನ್‌ ಭತ್ಯೆ ಎಂದು ವಾರಕ್ಕೆ ಸಾವಿರ ರೂಪಾಯಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಸಚಿವರ ಜತೆ ಮಾತನಾಡಿ, ಅವಶ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಶುಕ್ಲಾ ಭರವಸೆ ನೀಡಿದ್ದಾರೆ.

error: Content is protected !!