Sunday, December 14, 2025

ರಣವೀರ್ ಸಿಂಗ್ ‘ಧುರಂಧರ್’ ಅಬ್ಬರಕ್ಕೆ ಸ್ಯಾಂಡಲ್‌ವುಡ್ ‘ಡೆವಿಲ್’ ಕಂಗಾಲು; 3ನೇ ದಿನ ಗಳಿಕೆ ಹೀಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಡಿಸೆಂಬರ್ 11ರಂದು ಅದ್ದೂರಿಯಾಗಿ ತೆರೆಕಂಡಿತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ನಿರೀಕ್ಷೆಯಂತೆ ಮೊದಲ ದಿನ ಉತ್ತಮ ಕಲೆಕ್ಷನ್ ಆದರೂ, ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಗಣನೀಯವಾಗಿ ಕುಸಿತ ಕಂಡಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ‘ದಿ ಡೆವಿಲ್’ ಸಿನಿಮಾವು ಮೊದಲ ದಿನ 10 ಕೋಟಿ ರೂಪಾಯಿ ಗಳಿಸಿದೆ. ಆದರೆ ಚಿತ್ರತಂಡವು ಇದನ್ನು 13.8 ಕೋಟಿ ರೂಪಾಯಿ ಎಂದು ಘೋಷಿಸಿತ್ತು. ಆದರೆ, ಎರಡನೇ ದಿನಕ್ಕೆ ಈ ಕಲೆಕ್ಷನ್ ತೀವ್ರವಾಗಿ ಇಳಿದು 3.4 ಕೋಟಿ ರೂಪಾಯಿ ಮತ್ತು ಮೂರನೇ ದಿನ ಅಂದಾಜು 3.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಮೊದಲ ದಿನದ ಬೃಹತ್ ಓಪನಿಂಗ್‌ಗೆ ಹೋಲಿಸಿದರೆ, 2 ಮತ್ತು 3ನೇ ದಿನದ ಕಲೆಕ್ಷನ್ ಕುಸಿತವು ಚಿತ್ರತಂಡಕ್ಕೆ ಆತಂಕ ತಂದಿದೆ. ವಾರಂತ್ಯದಲ್ಲಿಯೂ ನಿರೀಕ್ಷಿತ ಮಟ್ಟದ ದೊಡ್ಡ ಮೊತ್ತವನ್ನು ಈ ಸಿನಿಮಾ ಗಳಿಸಿಲ್ಲ.

ದರ್ಶನ್ ಅವರ ಈ ಚಿತ್ರದ ಕಲೆಕ್ಷನ್ ಇಳಿಯಲು ಕೆಲವು ಸ್ಪಷ್ಟ ಕಾರಣಗಳು ಕಂಡುಬಂದಿವೆ:

ಪೈರಸಿ ಕಾಟ: ‘ದಿ ಡೆವಿಲ್’ ಚಿತ್ರದ ಪೈರಸಿ ಪ್ರತಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವ ಸಂಖ್ಯೆಯನ್ನು ತಗ್ಗಿಸಿದೆ. ಚಿತ್ರತಂಡದ ಪ್ರಯತ್ನಗಳ ಹೊರತಾಗಿಯೂ ಪೈರಸಿ ಹಾವಳಿಯನ್ನು ತಡೆಯಲು ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿ.

ಬೇರೆ ಭಾಷೆಯ ಚಿತ್ರಗಳ ಪೈಪೋಟಿ: ಹಿಂದಿಯ ಸೂಪರ್‌ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾಗಿ 10 ದಿನಗಳು ಕಳೆದರೂ, 9ನೇ ದಿನ ಈ ಚಿತ್ರಕ್ಕೆ ಬರೋಬ್ಬರಿ 53 ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದು ‘ದಿ ಡೆವಿಲ್’ ಚಿತ್ರದ ಗಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರಿದೆ.

ಒಟ್ಟಾರೆಯಾಗಿ, ‘ದಿ ಡೆವಿಲ್’ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ‘ಧುರಂಧರ್’ ನಿಂದ ತೀವ್ರ ಸ್ಪರ್ಧೆ ಎದುರಾಗಿದೆ. ಇದರ ಜೊತೆಗೆ ಪೈರಸಿ ಕಂಟಕವು ಚಿತ್ರದ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

error: Content is protected !!