ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪುದುಚೇರಿ ವಿರುದ್ಧ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಿಡಿಲಿನಂತೆ ತೋರಿಸಿದ್ದಾರೆ. ಟಿ20 ಸರಣಿಗೂ ಮುನ್ನ ತಮ್ಮ ಫಾರ್ಮ್ ಏರಿಕೆಯಾಗುತ್ತಿರುವುದು ಪಂಜಾಬ್ ಮಾತ್ರವಲ್ಲ, ಭಾರತೀಯ ತಂಡಕ್ಕೂ ಸಂತಸದ ಸೂಚನೆ ಎನ್ನಬಹುದು.
ಪಂಜಾಬ್ ಮೊದಲು ಬ್ಯಾಟಿಂಗ್ ಮಾಡಿದ್ದು, ಆರಂಭದಿಂದಲೇ ರನ್ ಮಳೆ ಸುರಿದಿದೆ. ನಾಯಕ ಅಭಿಷೇಕ್ ಶರ್ಮಾ ಕೇವಲ 9 ಎಸೆತಗಳಲ್ಲಿ 34 ರನ್ ಬಾರಿಸಿದರು. ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ ಬಂದ ಈ ಸ್ಫೋಟಕ ರನ್‌ಗಳು ಪುದುಚೇರಿ ಬೌಲರ್‌ಗಳಿಗೆ ತಲೆನೋವಾಯಿತು. ವಿಶೇಷವೆಂದರೆ, ಅಭಿಷೇಕ್ ಬಾರಿಸಿದ ಎಲ್ಲಾ ರನ್‌ಗಳು ಬೌಂಡರಿಗಳ ಮೂಲಕವೇ ಬಂದವು. ಬಳಿಕ ಉಳಿದ ಬ್ಯಾಟ್ಸ್‌ಮನ್‌ಗಳು ಸಹ ಕೈಜೋಡಿಸಿದ ಪರಿಣಾಮ, ಪಂಜಾಬ್ 192 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು.
ಬೌಲಿಂಗ್ ವಿಭಾಗದಲ್ಲೂ ಅಭಿಷೇಕ್ ಮಿಂಚಿದರು. ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಬಳಿಸಿದರು. ಆಯುಷ್ ಗೋಯಲ್ ಹಾಗೂ ಹರ್‌ಪ್ರೀತ್ ಬ್ರಾರ್ ಕೂಡ ತಲಾ ಮೂರು ಮತ್ತು ಎರಡು ವಿಕೆಟ್‌ಗಳನ್ನು ಪಡೆದು ಪುದುಚೇರಿ ಪ್ರತಿರೋಧವನ್ನು ಕುಗ್ಗಿಸಿದರು. ಪುದುಚೇರಿ ಕೊನೆಗೆ 138 ರನ್‌ಗಳಿಗೆ ಆಲೌಟ್ ಆಯಿತು.

