ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿರಂಗದಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆದ ಕ್ಷಣದಿಂದಲೇ ಸಂಚಲನ ಮೂಡಿಸಿದೆ. ಮೊದಲ ದಿನವೇ ದೇಶದ ಅನೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡು, ಚಿತ್ರ ಭವಿಷ್ಯದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸುವ ಸಾಧ್ಯತೆ ವ್ಯಕ್ತವಾಗಿದೆ.
ಅಕ್ಟೋಬರ್ 1ರಂದು ಆಯೋಜಿಸಲಾಗಿದ್ದ ಪ್ರೀಮಿಯರ್ ಶೋಗಳಿಂದಲೇ ಚಿತ್ರ ಅಭಿಮಾನಿಗಳ ಹೃದಯ ಗೆದ್ದಿದೆ. ಸಾವಿರಾರು ಕಡೆಗಳಲ್ಲಿ ನಡೆದ ಪ್ರೀಮಿಯರ್ ಶೋಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಅಕ್ಟೋಬರ್ 2ರ ಮಧ್ಯಾಹ್ನದ ತನಕ 7 ಸಾವಿರಕ್ಕೂ ಹೆಚ್ಚು ಜನರು ರೇಟಿಂಗ್ ನೀಡಿದ್ದು, 9.6 ಪಾಯಿಂಟ್‌ಗಳನ್ನು ದಾಖಲಿಸಿದೆ.
ಚಿತ್ರ ವಿಮರ್ಶೆಗಳು ಮತ್ತು ಪ್ರೇಕ್ಷಕರ ಮಾತುಗಳನ್ನು ಗಮನಿಸಿದರೆ, ಕಥನ ಶೈಲಿ, ತಾಂತ್ರಿಕ ಅಂಶಗಳು ಹಾಗೂ ರಿಷಬ್ ಶೆಟ್ಟಿಯ ನಟನ-ನಿರ್ದೇಶನ ಎಲ್ಲವನ್ನೂ ಹೊಗಳಲಾಗಿದೆ. ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಳಿ ಭಾಷೆಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿರುವುದು ಮತ್ತೊಂದು ಪಾಸಿಟಿವ್ ಅಂಶವಾಗಿದೆ.
ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರ ನಿರ್ವಹಿಸಿದ್ದು, ಅದೇ ಸಮಯದಲ್ಲಿ ನಿರ್ದೇಶನದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ವಿಶೇಷವಾಗಿ ಕೆಲ ದೃಶ್ಯಗಳನ್ನು ಅವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ, ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ಸ್ಥಾನ ಪಡೆಯುತ್ತಿದೆ.
‘ಕಾಂತಾರ: ಚಾಪ್ಟರ್ 1’ ಮೊದಲ ದಿನವೇ ಅಭೂತಪೂರ್ವ ಯಶಸ್ಸಿನ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ, ಪ್ರೇಕ್ಷಕರಿಗೆ ಕರಾವಳಿಯ ದೈವ ಸಂಸ್ಕೃತಿಯ ಸವಿಯನ್ನು ತಂದುಕೊಟ್ಟಿರುವ ಈ ಚಿತ್ರ, ಕನ್ನಡ ಸಿನಿರಂಗದ ಹೆಮ್ಮೆ ಎನಿಸಿಕೊಂಡಿದೆ.