Friday, October 3, 2025

Kantara | ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಿದ್ದಾರೆ ಶೆಟ್ರು: ಫಸ್ಟ್ ಡೇ ಎಷ್ಟಾಗಿದೆ ಗೊತ್ತಾ ಕಲೆಕ್ಷನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಮೊದಲ ದಿನವೇ ಭರ್ಜರಿ ದಾಖಲೆ ನಿರ್ಮಿಸಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶ-ವಿದೇಶ ಸೇರಿ ಒಟ್ಟು 55 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ.

ಭಾರತದ ಮಟ್ಟದಲ್ಲಿ ಮಾತ್ರವೇ ಅಂದಾಜು 45 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿದೆ. ಒಟ್ಟು 6,500ಕ್ಕೂ ಹೆಚ್ಚು ಸ್ಟೀನ್‌ಗಳಲ್ಲಿ 12,500ಕ್ಕೂ ಹೆಚ್ಚಿನ ಶೋಗಳು ನಡೆದಿದ್ದು, ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಬಿಡುಗಡೆಯ ಮುನ್ನವೇ ನಡೆದ ಪ್ರೀಮಿಯರ್ ಶೋಗಳು ಯಶಸ್ವಿಯಾಗಿದ್ದರಿಂದ ಸಿನಿಮಾ ಕುರಿತು ಉತ್ಸಾಹ ಇನ್ನಷ್ಟು ಹೆಚ್ಚಿಸಿತು. ಈಗಾಗಲೇ 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ಬಿಡುಗಡೆ ದಿನದಂದು ಪ್ರತಿ ಗಂಟೆಗೆ ಸುಮಾರು 60,000 ಟಿಕೆಟ್‌ಗಳು ಮಾರಾಟವಾದುದು ದಾಖಲೆ ಬರೆದಿದೆ.

ವಿದೇಶಗಳಲ್ಲಿ ಸಹ ಚಿತ್ರ ಉತ್ತಮ ಪ್ರದರ್ಶನ ನೀಡಿದ್ದು, ಅಮೆರಿಕಾದಲ್ಲಿ ಮಾತ್ರವೇ 4.20 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ. ಒಟ್ಟು 30ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಗೊಂಡ ಈ ಸಿನಿಮಾ ವಿದೇಶಗಳಲ್ಲಿ ಅಂದಾಜು 10 ಕೋಟಿ ರೂ. ಸಂಗ್ರಹಿಸಿದೆ. ದೆಹಲಿಯಲ್ಲಿ ಒಂದೇ ಟಿಕೆಟ್ 2,400 ರೂ.ಗೆ, ಬೆಂಗಳೂರಿನಲ್ಲಿ ಗರಿಷ್ಠ 1,200 ರೂ.ವರೆಗೆ ದರ ನಿಗದಿ ಮಾಡಿದ್ದರೂ, ಪ್ರೇಕ್ಷಕರ ಹರ್ಷದ ಅಭಿಮಾನದಲ್ಲಿ ಟಿಕೆಟ್‌ಗಳೆಲ್ಲ ಮಾರಾಟಗೊಂಡಿವೆ.

ಉತ್ತರ ಭಾರತದಲ್ಲಿ ಮಾತ್ರವೇ ಚಿತ್ರವು ಅಂದಾಜು 8 ರಿಂದ 10 ಕೋಟಿ ರೂ.ಗಳಷ್ಟು ಕಲೆಕ್ಷನ್ ಕಂಡಿದೆ. ಕರ್ನಾಟಕದಲ್ಲಿ ಅಂದಾಜು 20 ಕೋಟಿ ರೂ., ಆಂಧ್ರ ಪ್ರದೇಶದಲ್ಲಿ 5.3 ಕೋಟಿ ರೂ., ತಮಿಳುನಾಡಿನಲ್ಲಿ 3 ಕೋಟಿ ರೂ. ಹಾಗೂ ಮಲಯಾಳಂ ಆವೃತ್ತಿಯಲ್ಲಿ ಸುಮಾರು 65 ಲಕ್ಷ ರೂ. ಗಳಿಕೆ ಮಾಡಿದೆ.

ಮೊದಲ ದಿನವೇ 55 ಕೋಟಿಗೂ ಹೆಚ್ಚು ಸಂಗ್ರಹ ದಾಖಲಿಸಿರುವ ಕಾಂತಾರ ಚಾಪ್ಟರ್ 1 ಮುಂದಿನ ದಿನಗಳಲ್ಲಿ 100 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸುವುದು ಖಚಿತವೆನ್ನಲಾಗುತ್ತಿದೆ.