Friday, August 29, 2025

ಸೋಶಿಯಲ್‌ ಮೀಡಿಯಾದಿಂದ ಬ್ರೇಕ್‌ ಪಡೆದ ಶೆಟ್ರು! ಏನ್ ಕಥೆ?

ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಮತ್ತು ರೋಷನ್ ರಾಮಮೂರ್ತಿ ಮದುವೆ ಸಮಾರಂಭದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ಬಿ ಶೆಟ್ಟಿ ತಮ್ಮ ಆಪ್ತನಂತೆ ಕಾಣಿಸಿಕೊಂಡರು. ಮದುವೆಯ ಇಡೀ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಭಾಗವಹಿಸಿ, ಕೊನೆಯಲ್ಲಿ ‘ಸು ಫ್ರಂ ಸೋ’ ಸಿನಿಮಾದ ತಮ್ಮ ವೈರಲ್ ಹಾಡು “ಬಂದರೋ ಬಂದರೋ.. ಭಾವ ಬಂದರೋ” ಹಾಡಿ ಮದುವೆಯ ಅತಿಥಿಗಳನ್ನು ಮನರಂಜಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿ ಟ್ರೆಂಡಿಂಗ್‌ನಲ್ಲಿದೆ.

ಆದರೆ ಮದುವೆಯ ಸಂಭ್ರಮದ ಕೆಲವೇ ದಿನಗಳ ನಂತರ ರಾಜ್ ಬಿ ಶೆಟ್ಟಿ ಎಲ್ಲರಿಗೂ ಅಚ್ಚರಿ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. “ಥ್ಯಾಂಕ್ ಯು.. ಗುಡ್ ಬೈ” ಎಂದೇ ಹೇಳಿ ತಾವು ಕೆಲಕಾಲ ಮಾಯವಾಗುವುದಾಗಿ ಘೋಷಿಸಿದ್ದಾರೆ. ಇದರಿಂದ ಅವರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ. ಅಷ್ಟಕ್ಕೂ ಏನಾಯಿತು ಎಂಬ ಕುತೂಹಲ ಎಲ್ಲೆಡೆ ವ್ಯಕ್ತವಾಗಿದೆ.

ರಾಜ್ ಬಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದು, “ನಾನು ನನ್ನ ಕೆಲಸಗಳ ಮೇಲೆ ಗಮನಹರಿಸಬೇಕಾಗಿದೆ. ಈ ಕಾರಣದಿಂದ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುತ್ತಿದ್ದೇನೆ. ಇನ್ನು ಮುಂದೆ ನನ್ನ ಇನ್‌ಸ್ಟಾಗ್ರಾಂ ಪೇಜ್ ಅನ್ನು ನನ್ನ ತಂಡವೇ ನಿರ್ವಹಿಸಲಿದೆ” ಎಂದು ಪೋಸ್ಟ್ ಮಾಡಿದ್ದಾರೆ.

‘ಸು ಫ್ರಂ ಸೋ’ ಸಿನಿಮಾದ ಯಶಸ್ಸಿನ ನಂತರ ರಾಜ್ ಬಿ ಶೆಟ್ಟಿ ಹೊಸ ಪ್ರಾಜೆಕ್ಟ್‌ಗೆ ತಯಾರಿ ನಡೆಸುತ್ತಿರುವುದಾಗಿ ಊಹಿಸಲಾಗಿದೆ. ಈಗಾಗಲೇ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅಭಿನಯದ, ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಬಿಡುಗಡೆಯ ಹಂತದಲ್ಲಿದ್ದು, ಅದರ ಪ್ರಚಾರ ಕಾರ್ಯದಲ್ಲಿ ರಾಜ್ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ತಮ್ಮದೇ ಹೊಸ ಸಿನಿಮಾ ನಿರ್ದೇಶನಕ್ಕೂ ಮುನ್ನುಡಿ ಬರೆಯುತ್ತಿರುವ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ