ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯ ಶಸ್ತ್ರಚಿಕಿತ್ಸಕರೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚೈನ್ನೈನ ಸವಿತಾ ವೈದ್ಯಕೀಯ ಕಾಲೇಜಿನಲ್ಲಿ ಹಾರ್ಟ್ ಸರ್ಜನ್ ಆಗಿದ್ದ 39 ವರ್ಷ ವಯಸ್ಸಿನ ಡಾ. ಗ್ರಾಡ್ಲಿನ್ ರಾಯ್ ಎಂಬವರು ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಹಠಾತ್ತನೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಸುದ್ದಿ ಇದೀಗ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜಿನಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಗ್ರಾಡ್ಲಿನ್ ರಾಯ್ ಎಂಬವರು ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಸಹದ್ಯೋಗಿಗಳು ಅವರನ್ನು ಬದುಕಿಸಲು ಪ್ರಯತ್ನಪಟ್ಟರೂ ಅದು ವಿಫಲವಾಗಿದೆ.
ಈ ಆಘಾತಕಾರಿ ಸುದ್ದಿಯನ್ನು ಹೈದರಾಬಾದ್ ಮೂಲಕ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ಡಾ. ರಾಯ್ ಅವರ ಸಹೋದ್ಯೋಗಿಗಳು ಅವರ ಜೀವ ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಸಿಪಿಆರ್, ತುರ್ತು ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್, ಇಂಟ್ರಾ-ಅಯೋರ್ಟಿಕ್ ಬಲೂನ್ ಪಂಪ್ ಮತ್ತು ಇಸಿಎಂಒ ಅನ್ನು ಸಹ ಬಳಸಲಾಯಿತು. ಆದರೆ ಅವರನ್ನು ಉಳಿಸಲು ಮಾತ್ರ ಸಾಧ್ಯವಾಗಲಿಲ್ಲ’ ಎಂದು ಡಾ. ಸುಧೀರ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ 30 ರಿಂದ 40 ಹರೆಯದವರೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ವಿಪರ್ಯಾಸ ಏನೆಂದರೆ ಇತರರ ಹೃದಯಗಳನ್ನು ಉಳಿಸಲು, ಜೀವಗಳನ್ನು ಕಾಪಾಡಲು ಶ್ರಮಿಸುತ್ತಿರುವವರೇ ತಮ್ಮ ಹೃದಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿದ್ರಾಹೀನತೆ, ಅನಿಯಮಿತ ಕೆಲಸ, ಅನಿಯಮಿತ ಊಟ, ಆಸ್ಪತ್ರೆ ಕ್ಯಾಂಟಿನ್ ಆಹಾರ ಸೇವನೆ, ಕೆಫಿನ್ ಸೇವನೆ, ಮಾನಸಿಕ ಹೊರೆ ಇವೆಲ್ಲವೂ ಹೃದಯಾಘಾತಕ್ಕೆ ತುತ್ತಾಗಲು ಮುಖ್ಯ ಕಾರಣ. ಹಾಗಾಗಿ ಇತರ ಜೀವಗಳನ್ನು ಕಾಪಾಡಲು ಶ್ರಮಿಸುವ ವೈದ್ಯರು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕು, ನಿದ್ರೆಗೆ ಆದ್ಯತೆ ನೀಡಬೇಕು, ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು, ಒತ್ತಡವನ್ನು ನಿರ್ವಹಿಸಲು ಧ್ಯಾನ ಮಾಡಬೇಕು, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಬೇಕು, ವಿರಾಮ ತೆಗೆದುಕೊಂಡು ಕುಟುಂಬ ಸ್ನೇಹಿತರೊಂದಿಗೆ ಸಮಯ ಕಳೆಯಬೇಕು ಎಂದು ಡಾ. ಸುಧೀರ್ ಸಲಹೆ ನೀಡಿದ್ದಾರೆ.